ಬ್ರಿಟನ್ ಪಾರ್ಟಿಗೇಟ್ ಪ್ರಕರಣ: ಪ್ರಧಾನಿಯ 4 ನಿಕಟ ಸಹಾಯಕರ ರಾಜೀನಾಮೆ

Update: 2022-02-04 18:06 GMT

ಲಂಡನ್, ಫೆ.4: ಬ್ರಿಟನ್ ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಪಾರ್ಟಿಗೇಟ್ ಹಗರಣಕ್ಕೆ ಸಂಬಂಧಿಸಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಾಲ್ವರು ನಿಕಟ ಸಹಾಯಕರು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಬ್ರಿಟನ್ ನ ಎಲ್ಲೆಡೆ ಕಟ್ಟುನಿಟ್ಟಿನ ನಿರ್ಬಂಧ ಜಾರಿಯಲ್ಲಿದ್ದರೂ, ಪ್ರಧಾನಿ ಜಾನ್ಸನ್ ಅವರ ಕಚೇರಿ(ಡೌನಿಂಗ್ ಸ್ಟ್ರೀಟ್ನಲ್ಲಿದೆ)ಯ ಸಿಬ್ಬಂದಿಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಪಾರ್ಟಿ ನಡೆಸಿದ್ದರು. ಈ ಸಂದರ್ಭ ನಿರ್ಬಂಧಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಮತ್ತು ಇದಕ್ಕೆ ಸಂಬಧಿಸಿದ ವೀಡಿಯೊ ದೃಶ್ಯ ವೈರಲ್ ಆಗಿ ವಿವಾದದ ಬಿರುಗಾಳಿ ಎಬ್ಬಿಸಿತ್ತು. ಆರಂಭದಲ್ಲಿ ಜಾನ್ಸನ್ ಆರೋಪವನ್ನು ನಿರಾಕರಿಸಿ ಸಿಬಂದಿಗಳನ್ನು ಸಮರ್ಥಿಸಿಕೊಂಡಿದ್ದರೂ ಬಳಿಕ ಪಕ್ಷದೊಳಗಿಂದಲೇ ಆಗ್ರಹ ಕೇಳಿಬಂದಾಗ ತನಿಖೆಗೆ ಸಮಿತಿಯನ್ನು ರಚಿಸಲಾಗಿತ್ತು. ತನಿಖಾ ವರದಿಯಲ್ಲಿ ಪ್ರಧಾನಿಯ ಕಚೇರಿಯಲ್ಲಿ ಪಾರ್ಟಿ ನಡೆದಿರುವುದನ್ನು ಉಲ್ಲೇಖಿಸಲಾಗಿದೆ.
   
ಕಾರ್ಯನೀತಿ ವಿಭಾಗದ ಮುಖ್ಯಸ್ಥೆ ಮುನೀರಾ ಮಿರ್ಝಾ, ಸಿಬಂದಿ ಮುಖ್ಯಸ್ಥ ಡ್ಯಾನ್ ರೋಸನ್ಫೀಲ್ಡ್, ಪ್ರಧಾನ ಆಪ್ತಕಾರ್ಯದರ್ಶಿ ಮಾರ್ಟಿನ್ ರೆನಾಲ್ಡ್ಸ್, ಮಾಹಿತಿ ನಿರ್ದೇಶಕ ಜ್ಯಾಕ್ ಡಾಯ್ಲಾ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಜಾನ್ಸನ್ ಅವರ ನಾಯಕತ್ವದ ವಿರುದ್ಧ ಪಕ್ಷದೊಳಗೇ ಪ್ರಶ್ನೆ ಹೆಚ್ಚುತ್ತಿರುವ ಮಧ್ಯೆ ಸರಣಿ ರಾಜೀನಾಮೆಯ ಈ ಬೆಳವಣಿಗೆಯಿಂದ ಜಾನ್ಸನ್ ಅವರಿಗೆ ತೀವ್ರ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News