ಪಂಜಾಬ್ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮನೀಶ್ ತಿವಾರಿ, ಗುಲಾಂ ನಬಿ ಆಝಾದ್ ಹೆಸರಿಲ್ಲ!

Update: 2022-02-05 05:11 GMT
ಮನೀಶ್ ತಿವಾರಿ

ಹೊಸದಿಲ್ಲಿ: ಪಂಜಾಬ್‌ನಲ್ಲಿ ರಾಜ್ಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಇಬ್ಬರು ಪ್ರಮುಖ ನಾಯಕರನ್ನು ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿರುವ ಕಾಂಗ್ರೆಸ್ ನಿರ್ಧಾರ ಟೀಕೆಗೆ ಗುರಿಯಾಗಿದೆ.

ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ  ರಾಹುಲ್ ಗಾಂಧಿ ಸೇರಿದಂತೆ ಇತರರ ಪಟ್ಟಿಯಲ್ಲಿ ಮನೀಶ್ ತಿವಾರಿ ಹಾಗೂ  ಗುಲಾಂ ನಬಿ ಆಝಾದ್ ಹೆಸರಿಲ್ಲ. ಆಝಾದ್ ಹೆಸರು ಉತ್ತರಪ್ರದೇಶದ ಮೊದಲ ಹಂತದ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿತ್ತು.  

ತಿವಾರಿ ಅವರನ್ನು ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿರುವುದು ಇನ್ನಷ್ಟು ಆಶ್ಚರ್ಯಕರವಾಗಿದೆ.  ಏಕೆಂದರೆ ಅವರು ಪಂಜಾಬ್‌ನಿಂದ ಹಾಲಿ ಲೋಕಸಭಾ ಸದಸ್ಯರಾಗಿರುವುದಲ್ಲದೆ,  ರಾಜ್ಯದಲ್ಲಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಸುಮಾರು 40 ಶೇ.ರಷ್ಟಿರುವ ಹಿಂದೂ ಸಮುದಾಯದಿಂದ ಬಂದಿರುವ ತಿವಾರಿ  ಅವರು ಹಿಂದೂ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.

"ಜಿ-23" ಬಂಡಾಯ ನಾಯಕರಾಗಿ ಗುರುತಿಸಿಕೊಂಡಿದ್ದ ತಿವಾರಿ ಮತ್ತು ಆಝಾದ್  ಅವರು 2020 ರಲ್ಲಿ ಸೋನಿಯಾ ಗಾಂಧಿ ಅವರಿಗೆ  ಪತ್ರ ಬರೆದ ಸ್ಫೋಟಕ ಪತ್ರದಲ್ಲಿ,  ಪಕ್ಷದಲ್ಲಿ ‘ವ್ಯಾಪಕ ಬದಲಾವಣೆಗಳು’ ಹಾಗೂ  ‘ತುರ್ತು ಸುಧಾರಣೆಗಳ ಅಗತ್ಯತೆ’ಯ ಬಗ್ಗೆ ಬರೆದಿದ್ದರು.

ಆದರೆ ಶುಕ್ರವಾರದ ಪ್ರಚಾರಕರ ಪಟ್ಟಿಯಲ್ಲಿ ಜಿ -23 ರ ಭಾಗವಾಗಿದ್ದ  ಇನ್ನಿಬ್ಬರು ನಾಯಕರಾದ ಆನಂದ್ ಶರ್ಮಾ ಮತ್ತು ಭೂಪಿಂದರ್ ಸಿಂಗ್ ಹೂಡಾ ಇದ್ದರು.

 "ಇದು ಇನ್ನೊಂದು ರೀತಿಯಲ್ಲಿ ಇದ್ದಿದ್ದರೆ ನಾನು ಆಹ್ಲಾದಕರವಾಗಿ ಆಶ್ಚರ್ಯ ಪಡುತ್ತಿದ್ದೆ. ಕಾರಣಗಳು ಕೂಡ  ರಹಸ್ಯವಲ್ಲ’’ ಎಂದು ಮನೀಶ್ ತಿವಾರಿ ಟ್ವೀಟಿಸಿದ್ದಾರೆ.

"ಪಂಜಾಬ್ ಕಾಂಗ್ರೆಸ್  ನಲ್ಲಿ ದುಃಖದ ಸ್ಥಿತಿ. ತಿವಾರಿ ಅವರು ಪ್ರಮುಖ ಹಿರಿಯ ಕಾಂಗ್ರೆಸ್ ನಾಯಕ, ಪಂಜಾಬ್‌ನ ಸಂಸದ ಹಾಗೂ  ಮಾಜಿ ಸಚಿವ. ತಿವಾರಿ ಅವರನ್ನು ಚುನಾವಣಾ ಪ್ರಚಾರಕರ ಪಟ್ಟಿಯಿಂದ ಹೊರಗಿಟ್ಟಿದ್ದಾರೆ! ಇಂತಹ ಸಂಕುಚಿತ ಹೆಜ್ಜೆಗಳು ಚುನಾವಣೆ ಗೆಲ್ಲಲು ಕಾಂಗ್ರೆಸ್‌ಗೆ ಎಂದಿಗೂ ಸಹಾಯ ಮಾಡುವುದಿಲ್ಲ’’ ಎಂದು ಕಳೆದ ವರ್ಷ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದ ಮಾಜಿ ಕಾಂಗ್ರೆಸ್ ಸಂಸದ ಅಭಿಜಿತ್ ಮುಖರ್ಜಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News