ನಾಗರಿಕ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಇರಾನ್ ಮೇಲಿನ ಕೆಲ ನಿರ್ಬಂಧ ಮನ್ನಾ ಮಾಡಿದ ಅಮೆರಿಕ
ವಾಷಿಂಗ್ಟನ್, ಫೆ.5: ಇರಾನ್ನೊಂದಿಗಿನ 2015ರ ಪರಮಾಣು ಒಪ್ಪಂದ ಮರುಸ್ಥಾಪನೆಯ ಉದ್ದೇಶದ ಮಾತುಕತೆ ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿರುವಂತೆಯೇ, ಅಮೆರಿಕವು ಇರಾನ್ನ ನಾಗರಿಕ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ನಿರ್ಬಂಧಗಳನ್ನು ಮನ್ನಾ ಮಾಡಿದೆ ಎಂದು ವರದಿಯಾಗಿದೆ.
ವಿಯೆನ್ನಾದಲ್ಲಿ ಪರಮಾಣು ಒಪ್ಪಂದದ ಕುರಿತ ಮಾತುಕತೆಯ ಸಂದರ್ಭದಲ್ಲೇ ಈ ಮಹತ್ವದ ನಿರ್ಧಾರಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಸಹಿ ಹಾಕಿದ್ದಾರೆ. ಅಲ್ಪಾವಧಿಯ ಈ ಮನ್ನಾ ಉಪಕ್ರಮದಡಿ, ಇರಾನ್ನ ನಾಗರಿಕ ಪರಮಾಣು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವಿದೇಶಿ ದೇಶಗಳು ಹಾಗೂ ಸಂಸ್ಥೆಗಳಿಗೆ ಅಮೆರಿಕದ ದಂಡದಿಂದ ವಿನಾಯಿತಿ ದೊರಕುತ್ತದೆ.
2015ರ ಒಪ್ಪಂದ ಮರುಸ್ಥಾಪನೆಗೆ ಇರಾನ್ ಅನ್ನು ಪ್ರಲೋಭನೆಗೊಳಿಸುವ ಉದ್ದೇಶ ಇದರ ಹಿಂದಿದೆ. ಇರಾನ್ ಈ ಒಪ್ಪಂದ ಪಾಲಿಸುತ್ತಿಲ್ಲ ಎಂದು ಹೇಳಿದ್ದ ಡೊನಾಲ್ಡ್ ಟ್ರಂಪ್ ಸರಕಾರ 2018ರಲ್ಲಿ ಒಪ್ಪಂದದಿಂದ ಹಿಂದೆ ಸರಿದು ಇರಾನ್ ವಿರುದ್ಧ ಹಲವು ನಿರ್ಬಂಧಗಳನ್ನು ಮರುಸ್ಥಾಪಿಸಿಲಾಗಿತ್ತು.
ಒಪ್ಪಂದದ ಮರುಸ್ಥಾಪನೆಗೆ ನೆರವು ಕ್ರೋಢೀಕರಿಸಲು ಈ ಕ್ರಮ ಅಗತ್ಯವಾಗಿದೆ ಎಂದಿರುವ ಅಮೆರಿಕ, ಆದರೆ ಇರಾನ್ ಗೆ ಯಾವುದೇ ವಿನಾಯಿತಿ ಒದಗಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಒಪ್ಪಂದದ ಇತರ ಪಕ್ಷಗಳಾದ ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ, ರಶ್ಯಾ ಮತ್ತು ಯುರೋಪಿಯನ್ ಯೂನಿಯನ್ಗಳನ್ನು ಮಾತುಕತೆಯ ಮೇಜಿಗೆ ಕರೆತರಲು ಈ ಕ್ರಮ ಅಗತ್ಯವಾಗಿತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಜೆಸಿಪಿಒಎ(ಜಂಟಿ ಸಮಗ್ರ ಕ್ರಿಯಾ ಯೋಜನೆ)ಗೆ ತನ್ನ ಬದ್ಧತೆಯನ್ನು ಇರಾನ್ ದೃಢಪಡಿಸುವ ವರೆಗೆ ನಾವು ಇರಾನ್ ಗೆ ನಿರ್ಬಂಧದಿಂದ ವಿನಾಯಿತಿ ಒದಗಿಸುವುದಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾ ನೆಡ್ ಪ್ರೈಸ್ ಟ್ವೀಟ್ ಮಾಡಿದ್ದಾರೆ.ಈ ಹಿಂದಿನ ಆಡಳಿತ ಮಾಡಿರುವುದನ್ನೇ ನಾವೂ ಮಾಡಿದ್ದೇವೆ. ಇರಾನ್ನಲ್ಲಿ ಹೆಚ್ಚುತ್ತಿರುವ ಪರಮಾಣು ಪ್ರಸರಣ ಮತ್ತು ಸುರಕ್ಷತೆಯ ಅಪಾಯಗಳತ್ತ ಗಮನ ಹರಿಸಲು ನಮ್ಮ ಅಂತರಾಷ್ಟ್ರೀಯ ಪಾಲುದಾರರಿಗೆ ಅವಕಾಶ ನೀಡಿದ್ದೇವೆ ಎಂದವರು ಹೇಳಿದ್ದಾರೆ.
ಈ ಚಟುವಟಿಕೆಗೆ ಸಂಬಂಧಿಸಿದ ಮನ್ನಾವು ಜೆಸಿಪಿಒಎಯ ಸಂಪೂರ್ಣ ಅನುಷ್ಟಾನಕ್ಕೆ ಪೂರಕವಾದ ಮಾತುಕತೆಗೆ ಅನುಕೂಲ ವಾತಾವರಣ ಕಲ್ಪಿಸುವ ಮತ್ತು ಚರ್ಚೆಯನ್ನು ಸುಗಮಗೊಳಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಮತ್ತು ಜಂಟಿ ಸಮಗ್ರ ಕ್ರಿಯಾ ಯೋಜನೆಯ ಬದ್ಧತೆಗೆ ಇರಾನ್ ಮರಳಲು ಸೂಕ್ತ ಅಡಿಪಾಯ ಹಾಕಿಕೊಡಲಿದೆ ಎಂದು ಸಂಸತ್ಗೆ ಸಲ್ಲಿಸಿದ ವರದಿಯಲ್ಲಿ ಅಮೆರಿಕದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.
ಜತೆಗೆ, ಪ್ರಸರಣ ಮಾಡದಿರುವುದು ಮತ್ತು ಪರಮಾಣು ಸುರಕ್ಷತೆಗೆ ಸಂಬಂಧಿಸಿದ ಅಮೆರಿಕದ ಹಿತಾಸಕ್ತಿಯನ್ನು ರಕ್ಷಿಸುವ ಮತ್ತು ಇರಾನ್ನ ಪರಮಾಣು ಕಾರ್ಯಕ್ರಮಗಳನ್ನು ನಿರ್ಬಂಧಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನೀತಿಯ ವಿವೇಚನೆಯ ವಿಷಯವಾಗಿ ಮನ್ನಾ ಜಾರಿಗೊಳಿಸಲಾಗಿದೆಯೇ ಹೊರತು ಇಲ್ಲಿ ಯಾವುದೇ ಕೊಡು-ಕೊಳ್ಳುವಿಕೆಯ ಅಂಶವಿಲ್ಲ. ಇರಾನ್ ಒಡ್ಡುವ ಪೂರ್ಣ ಪ್ರಮಾಣದ ಬೆದರಿಕೆಯನ್ನು ಎದುರಿಸಲು ನಮ್ಮ ಮಿತ್ರರು ಹಾಗೂ ಪಾಲುದಾರರೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸುವತ್ತ ಗಮನ ಹರಿಸಿದ್ದೇವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
2018ರಲ್ಲಿ ಟ್ರಂಪ್ ಆಡಳಿತ 2015ರ ಇರಾನ್ ಪರಮಾಣು ಒಪ್ಪಂದದಿಂದ ಹಿಂದೆ ಸರಿದಿತ್ತು. ಅಮೆರಿಕ ಒಪ್ಪಂದದಿಂದ ಹಿಂದೆ ಸರಿದಿರುವುದರಿಂದ ಈ ಒಪ್ಪಂದವನ್ನು ತಾನು ಪಾಲಿಸುವುದಿಲ್ಲ ಎಂದು ಇರಾನ್ ಹೇಳಿತ್ತು. ಈ ಒಪ್ಪಂದ ಮರುಸ್ಥಾಪನೆ ತನ್ನ ಮೊದಲ ಆದ್ಯತೆಯಾಗಲಿದೆ ಎಂದು ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಜೋ ಬೈಡನ್ ಘೋಷಿಸಿದ್ದರು. ಈ ನಿಟ್ಟಿನಲ್ಲಿ, ಈಗ ಘೋಷಿಸಿರುವ ಕೆಲವು ಮನ್ನಾಗಳು ಪ್ರಮುಖ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.