ಇಥಿಯೋಪಿಯಾದಿಂದ ಪಲಾಯನಗೈದ 20,000 ನಿರಾಶ್ರಿತರಿಗೆ ತುರ್ತು ನೆರವು ಒದಗಿಸಿದ ವಿಶ್ವಸಂಸ್ಥೆ

Update: 2022-02-05 17:45 GMT

ವಿಶ್ವಸಂಸ್ಥೆ, ಫೆ.5: ಇಥಿಯೋಪಿಯಾದ ಬೆನಿಶಾಂಗುಲ್ ಗುಮರ್ ವಲಯದಲ್ಲಿನ ಹಿಂಸಾಚಾರದಿಂದ ಕಂಗೆಟ್ಟು ಪಲಾಯನ ಮಾಡಿರುವ 20,000ಕ್ಕೂ ಅಧಿಕ ನಿರಾಶ್ರಿತರಿಗೆ ವಿಶ್ವಸಂಸ್ಥೆಯು ಜೀವ ಉಳಿಸುವ ನೆರವನ್ನು ಒದಗಿಸಿದ್ದು ಇನ್ನಷ್ಟು ನೆರವು ಒದಗಿಸಲು ಹೆಚ್ಚುವರಿ ನಿಧಿ ಒದಗಿಸುವಂತೆ ದೇಣಿಗೆದಾರರಿಗೆ ಕರೆ ನೀಡಿದೆ. ‌

ಡಿಸೆಂಬರ್ನಿಂದ ಗುಮರ್ ವಲಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇಲ್ಲಿ ಸುಡಾನ್ನ 70,000 ವಲಸಿಗರು ಹಾಗೂ ಆಂತರಿಕವಾಗಿ ಸ್ಥಳಾಂತರಗೊಂಡ 5 ಲಕ್ಷ ಇಥಿಯೋಪಿಯನ್ನರು ನೆಲೆಸಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ(ಯುಎನ್ಎಚ್ಸಿಆರ್) ಶುಕ್ರವಾರ ವರದಿ ಮಾಡಿದೆ. ಸ್ಥಳಾಂತರಗೊಂಡ ವಲಸಿಗರಿಗೆ ಬಿಸಿಯೂಟ, ಶುದ್ಧ ನೀರು ಮತ್ತು ವೈದ್ಯಕೀಯ ನೆರವಿನ ಸಹಿತ ತುರ್ತು ನೆರವು ಒದಗಿಸಲು ಇಥಿಯೋಪಿಯಾ ಸರಕಾರ ಹಾಗೂ ಇತರ ಪಾಲುದಾರ ಸಂಸ್ಥೆಗಳ ಸಹಾಯದಿಂದ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಯುಎನ್ಎಚ್ಸಿಆರ್ ವಕ್ತಾರ ಬೋರಿಸ್ ಚೆಶಿರ್ಕೋವ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಇಥಿಯೋಪಿಯಾದ ಟೋಂಗೊ ನಗರದಲ್ಲಿ ಜನವರಿ 18ರಂದು ಸರಕಾರಿ ಪಡೆ ಹಾಗೂ ಗುರುತಿಸಲಾಗದ ಸಶಸ್ತ್ರಧಾರಿ ತಂಡದ ಮಧ್ಯೆ ಘರ್ಷಣೆ ಸ್ಫೋಟಗೊಂಡಿದ್ದು ಸಮೀಪದಲ್ಲಿದ್ದ, 10,300 ವಲಸಿಗರು ನೆಲೆಸಿದ್ದ ಶಿಬಿರವನ್ನು ಲೂಟಿ ಮಾಡಿ ಬೆಂಕಿಹಚ್ಚಲಾಗಿತ್ತು. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾನವೀಯ ನೆರವು ಒದಗಿಸುವ ಕಾರ್ಯಕರ್ತರನ್ನು ಸ್ಥಳಾಂತರಿಸುವ ಪರಿಸಿ್ಥತಿ ಬಂದಿತ್ತು ಎಂದವರು ಹೇಳಿದ್ದಾರೆ.

ಘರ್ಷಣೆ ಭುಗಿಲೆದ್ದ ಬಳಿಕ 20,000ಕ್ಕೂ ಅಧಿಕ ವಲಸಿಗರು ಪ್ರಾದೇಶಿಕ ರಾಜಧಾನಿ ಅಸ್ಸೋಸಾದ ಬಳಿಯ ಪ್ರದೇಶಕ್ಕೆ ಪಲಾಯನ ಮಾಡಿದ್ದಾರೆ. ಮಕ್ಕಳು ಹಾಗೂ ಮಹಿಳೆಯರ ಸಹಿತ ಸುಮಾರು 70 ಸುಡಾನ್ ನಿರಾಶ್ರಿತರು ಇಥಿಯೋಪಿಯಾದಿಂದ ಸುಡಾನ್ಗೆ ಪಲಾಯನ ಮಾಡಿದ್ದಾರೆ. ಈ ವರ್ಷ ಇಥಿಯೋಪಿಯಾಕ್ಕೆ ಅಗತ್ಯವಸ್ತುಗಳನ್ನು ಒದಗಿಸಲು 335 ಮಿಲಿಯನ್ ಡಾಲರ್ನ ಅಗತ್ಯವಿದ್ದು ಈ ಮೊತ್ತದ 9%ದಷ್ಟು ಹಣ ಇದುವೆಗೆ ಲಭಿಸಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News