ನ್ಯೂಯಾರ್ಕ್: ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾನಿ

Update: 2022-02-05 17:50 GMT
ಮಹಾತ್ಮಾ ಗಾಂಧಿ | PTI

ನ್ಯೂಯಾರ್ಕ್, ಫೆ.5: ಮ್ಯಾನ್ಹಟನ್ ನಗರದ ಬಳಿಯ ಯೂನಿಯನ್ ಸ್ಕ್ವೇರ್ ಬಳಿ ಸ್ಥಾಪಿಸಿದ್ದ ಮಹಾತ್ಮಾ ಗಾಂಧೀಜಿಯವರ ಆಳೆತ್ತರದ ಪ್ರತಿಮೆಯನ್ನು ಶನಿವಾರ ಧ್ವಂಸಗೊಳಿಸಲಾಗಿದ್ದು ಇದೊಂದು ತುಚ್ಛ ಕೃತ್ಯ ಎಂದು ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಖಂಡಿಸಿದೆ.

ಈ ದುಷ್ಕೃತ್ಯವು ಭಾರತೀಯ ಅಮೆರಿಕನ್ ಸಮುದಾಯದಲ್ಲಿ ಆಘಾತ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಶನಿವಾರ ಬೆಳಿಗ್ಗೆ ಗುರುತಿಸಲಾಗದ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದು ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ದೂರು ನೀಡಲಾಗಿದೆ ಎಂದು ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯ ಹೇಳಿಕೆ ತಿಳಿಸಿದೆ.

ಈ ವಿಷಯವನ್ನು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ಗಮನಕ್ಕೂ ತರಲಾಗಿದ್ದು ಈ ಬಗ್ಗೆ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಗಾಂಧಿ ಸ್ಮರಣಾರ್ಥ ಅಂತರಾಷ್ಟ್ರೀಯ ಪ್ರತಿಷ್ಟಾನ ಕೊಡುಗೆ ನೀಡಿದ್ದ 8 ಅಡಿ ಎತ್ತರದ ಪ್ರತಿಮೆಯನ್ನು ಗಾಂಧೀಜಿಯವರ 117ನೇ ಜನ್ಮದಿನಾಚರಣೆ ಸಂದರ್ಭದಲ್ಲಿ 1986ರ ಅಕ್ಟೋಬರ್ 2ರಂದು ಪ್ರತಿಷ್ಟಾಪಿಸಲಾಗಿದೆ. ಕ್ಯಾಲಿಫೋರ್ನಿಯಾದ ಪಾರ್ಕ್ನಲ್ಲಿ ಪ್ರತಿಷ್ಟಾಪಿಸಿದ್ದ ಗಾಂಧೀಜಿಯವರ ಪ್ರತಿಮೆಗೆ ಕಳೆದ ತಿಂಗಳು ಹಾನಿ ಎಸಗಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News