ಹಿರಿಯ ಗಾಯಕಿ ಲತಾ ಮಂಗೇಶ್ಕರ್ ನಿಧನ
ಮುಂಬೈ,ಫೆ.6: ತನ್ನ ಸುಮಧುರ ಕಂಠದಿಂದ 6ದಶಕಗಳ ಕಾಲ ಭಾರತೀಯರಿಗೆ ಸಂಗೀತ ಸುಧೆಯನ್ನು ಉಣಿಸಿದ ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ರವಿವಾರ ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.
ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 92 ವರ್ಷದ ಲತಾ ಮಂಗೇಶ್ಕರ್ ಅವರನ್ನು ಜನವರಿ 8ರಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕಳೆದ ಕೆಲವು ವಾರಗಳ ಕಾಲ ಲತಾ ಅವರ ಆರೋಗ್ಯ ಪರಿಸ್ಥಿತಿಯಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿದ್ದವು. ಆದಾಗ್ಯೂ ಶನಿವಾರ ಅವರ ದೇಹಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿತ್ತು. ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು. ಲತಾ ಅವರ ನಿಧನದೊಂದಿಗೆ ಭಾರತೀಯ ಸಂಗೀತ ಲೋಕದ ಅನರ್ಘ್ಯ ರತ್ನವೊಂದು ಕಣ್ಮರೆಯಾದಂತಾಗಿದೆ.
ಹಿಂದಿ ಚಿತ್ರಗಳಲ್ಲಿ 25 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಲತಾ ಭಾರತೀಯ ಸಂಗೀತ ಪ್ರೇಮಿಗಳನ್ನು ಗಾನಸುಧೆಯಲ್ಲಿ ತೇಲಿಸಿದ್ದರು. ಮರಾಠಿ ಹಾಗೂ ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲಿಯೂ ಲತಾ ಹಲವಾರು ಹಾಡುಗಳನ್ನು ಹಾಡಿದ್ದರು.
ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತರತ್ನವನ್ನು 2001ರಲ್ಲಿ ಲತಾ ಮಂಗೇಶ್ಕಕರ್ ಅವರಿಗೆ ಪ್ರದಾನ ಮಾಡಲಾಗಿತ್ತು. ಪದ್ಮವಿಭೂಷಣ (1999) ,ಪದ್ಮಭೂಷಣ (1969)ಹಾಗೂ ದಾದಾ ಸಾಹೇಬ್ ಫಾಲ್ಕೆ (1989) ಸೇರಿದಂತೆ ಅಸಂಖ್ಯ ಪ್ರಶಸ್ತಿಗಳಿಂದ ಪುರಸ್ಕೃತರಾದ ಲತಾ, ಭಾರತೀಯ ಸಿನೆಮಾ ಸಂಗೀತದ ಜೀವಂತ ದಂತಕತೆಯಾಗಿದ್ದರು. ಪ್ರತಿಷ್ಠಿತ ಸಂಗೀತ ಕಲಾವಿದರ ಕುಟುಂಬಕ್ಕೆ ಸೇರಿದವರಾದ ಲತಾ ಮಂಗೇಶ್ಕಕರ್ ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶಕಿ ಕೂಡಾ ಆಗಿದ್ದರು ಹಾಗೂ ಇನ್ನು ಕೆಲವು ಚಿತ್ರಗಳಿಗೆ ನಿರ್ಮಾಪಕಿಯೂ ಆಗಿದ್ದರು.
1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ಅವರು ತನ್ನ ಒಡಹುಟ್ಟಿದವರ ಪೈಕಿ ಹಿರಿಯರಾಗಿದ್ದರು. ಅವರ ಸಹೋದರ ಆಶಾ ಭೋಂಸ್ಲೆ ಕೂಡಾ ಹಿಂದಿ ಚಿತ್ರರಂಗದ ಖ್ಯಾತ ಗಾಯಕಿಯಾಗಿದ್ದರು. ಲತಾ ಅವರ ತಂದೆ ದೀನನಾಥ ಮಂಗೇಶ್ಕರ್ ಖ್ಯಾತ ಶಾಸ್ತ್ರೀಯ ಸಂಗೀತ ಕಲಾವಿದರಾಗಿದ್ದರು. ಲತಾ ಮಂಗೇಶ್ಕರ್ ಅವರು ಬಾಲ್ಯದಲ್ಲಿ ತನ್ನ ತಂದೆಯಿಂದಲೇ ಸಂಗೀತ ಅಭ್ಯಾಸ ಮಾಡಿದ್ದರು.
13ನೇ ವಯಸ್ಸಿನಲ್ಲಿ ಗಾಯನ ವೃತ್ತಿಯನ್ನು ಆರಂಭಿಸಿದ ಲತಾ ಅವರು ಕೆಲವು ಮರಾಠಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಹಿಂದಿ ಚಿತ್ರ ಮಹಲ್ ಚಿತ್ರದ ಆಯೇಗಾ ಆನೆ ವಾಲಾ ಹಾಡಿನ ಮೂಲಕ ಲತಾ ಇಡೀ ಭಾರತದ ಸಂಗೀತ ಪ್ರಿಯರ ಮನೆಮಾತಾದರು. ಬೈಜು ಬಾವ್ರಾ, ಮದರ್ ಇಂಡಿಯಾ, ಮುಘಲೆ ಅಝಮ್, ಬರ್ಸಾತ್ ಹಾಗೂ ಶ್ರೀ420 ಚಿತ್ರಗಳಲ್ಲಿ ಅವರು ಕೋಗಿಲೆಕಂಠದಿಂದ ಹಾಡಿದ ಹಾಡುಗಳು ಭಾರೀ ಜನಪ್ರಿಯವಾದವು.
ಪರಿಚಯ್, ಕೋರಾ ಕಾಗಝ್ ಹಾಗೂ ಲೇಕಿನ್ ಚಿತ್ರಗಳ ಹಾಡುಗಳಿಗಾಗಿ ಲತಾ ಅವರಿಗೆ ಅತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರಗಳು ಲಭಿಸಿದ್ದವು. ಪಾಕಿಝಾ, ಅಭಿಮಾನ್, ಅಮರ್ ಪ್ರೇಮ್, ಆಂಧಿ, ಸಿಲ್ಸಿಲಾ, ಚಾಂದನಿ, ಸಾಗರ್, ರುಡಾಲಿ ಹಾಗ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರಗಳಲ್ಲಿ ಲತಾ ಹಾಡಿದ ಹಾಡುಗಳು ಭಾರತೀಯ ಸಂಗೀತ ಜಗತ್ತಿನಲ್ಲಿ ಅವಿಸ್ಮರಣೀಯವಾಗಿವೆ.
1962ರ ಭಾರತ-ಚೀನಾ ಯುದ್ದದಲ್ಲಿ ವೀರಮರಣವನ್ನಪ್ಪಿದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿಯಾಗಿ ಯೇ ಮೇರೆ ವತನ್ ಕೆ ಲೋಗೋ ದೇಶಭಕ್ತಿಗೀತೆಯನ್ನು 1963ರ ಹೊಸದಿಲ್ಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಲತಾಮಂಗೇಶ್ಕರ್ ಹಾಡಿದ್ದರು. ಆಗಿನ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಹಾಗೂ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಉಪಸ್ಥಿತಿಯಲ್ಲಿ ಲತಾ ಹಾಡಿದ್ದ ಈ ಹಾಡು ಕೋಟ್ಯಂತರ ಭಾರತೀಯರು ಭಾವುಕರಾಗಿದ್ದರು.
ಅವಿವಾಹಿತರಾಗಿರುವ ಲತಾಮಂಗೇಶ್ಕರ್ , ತನ್ನ ಬದುಕನ್ನು ಸಂಗೀತ ಕ್ಷೇತ್ರದ ಸಾಧನೆಗೆ ಮುಡಿಪಾಗಿಟ್ಟಿದ್ದರು. ಲತಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರತಿಪಕ್ಷ ನಾಯಕಿ ಸೋನಿಯಾಗಾಂಧಿ ಸೇರಿದಂತೆ ಹಲವಾರು ಗಣ್ಯರು, ಚಿತ್ರೋದ್ಯಮದ ಮಂದಿ ಕಣ್ಣೀರು ಮಿಡಿದಿದ್ದಾರೆ.
ಗಾನಕೋಗಿಲೆ ಲತಾಮಂಗೇಶ್ಕರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಲತಾ ಅವರ ನಿಧನದಿಂದ ಪದಗಳನ್ನು ಮೀರಿದಷ್ಟು ವೇದನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ದಯಾಳು ಹಾಗೂ ವಾತ್ಸಲ್ಯಮಯಿ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ಆಕೆ ನಮ್ಮ ದೇಶದಲ್ಲಿ ಎಂದಿಗೂ ತುಂಬಲಾರದಂತಹ ಶೂನ್ಯವೊಂದನ್ನು ಬಿಟ್ಟುಹೋಗಿದ್ದಾರೆ. ತನ್ನ ಸುಶ್ರಾವ್ಯ ಧ್ವನಿಯಿಂದ ಜನರನ್ನು ಮೋಡಿಮಾಡಿದಂತಹ ಭಾರತೀಯ ಸಂಸ್ಕೃತಿಯ ಧೀಮಂತ ವ್ಯಕ್ತಿಯೆಂದು ಮುಂದಿನ ತಲೆ ಮಾರುಗಳು ಲತಾ ಅವರನ್ನು ಸ್ಮರಿಸಿಕೊಳ್ಳಲಿವೆ’’ಎಂದವರು ಟ್ವೀಟ್ ಮಾಡಿದ್ದಾರೆ.
‘‘ಲತಾ ಅವರಿಂದ ಅಗಾಧವಾದ ಮಮತೆಯನ್ನು ಪಡೆದಿರುವುದು ನನಗೆ ದೊರೆತ ಗೌರವವೆಂದು ನಾನು ಪರಿಗಣಿಸುತ್ತೇನೆ ಅವರೊಂದಿಗಿನ ನನ್ನ ಒಡನಾಟವು ಅವಿಸ್ಮರಣೀಯವಾದುದು. ಲತಾ ದೀದಿಯವರ ನಿಧನಕ್ಕಾಗಿ ನಾನು ಭಾರತೀಯ ಬಾಂಧವರೊಂದಿಗೆ ಶೋಕಿಸುತ್ತೇನೆ. ಅವರ ಕುಟುಂಬದೊಂದಿಗೆ ನಾನು ಮಾತನಾಡಿದ್ದು, ಸಂತಾಪವನ್ನು ಸೂಚಿಸಿದ್ದೇನೆ. ಓಂ ಶಾಂತಿ’’ ಎಂದವರು ಹೇಳಿದ್ದಾರೆ.
ಲತಾ ಮಂಗೇಶ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಣ್ಣೀರು ಮಿಡಿದಿದ್ದಾರೆ. ‘‘ ಲತಾ ಜೀ ಅವರ ನಿಧನದಿಂದ ನನಗೆ ಆಘಾತವಾಗಿದೆ. ಆಕೆ ಹಾಡಿರುವ ವೈವಿಧ್ಯಮಯ ಹಾಡುಗಳು, ಭಾರತದ ಅಂತಸತ್ವ ಹಾಗೂ ಸೌಂದರ್ಯವನ್ನು ತನ್ನ ಹಾಡುಗಳಲ್ಲಿ ಆಕೆ ಬಿಂಬಿಸಿದ್ದಾರೆ. ಹಲವಾರು ತಲೆಮಾರುಗಳು ಆಕೆಯ ಹಾಡುಗಳಿಂದ ತಮ್ಮ ಅಂತರಂಗದ ಭಾವನೆಗ ಅಭಿವ್ಯಕ್ತಿಗೊಂಡಿರುವುದನ್ನು ಕಂಡಿದ್ದಾರೆ. ಭಾರತ ರತ್ನ ಲತಾ ಜೀ ಅವರ ಸಾಧನೆಗಳು ಎಂದಿಗೂ ಅತುಲ್ಯವಾಗಿಯೇ ಉಳಿಯಲಿದೆ ಎಂದವರು ಟ್ವೀಟ್ ಮಾಡಿದ್ದಾರೆ.
ರಾಜ್ಯಸಭೆ ಸದಸ್ಯೆಯಾಗಿ ವೇತನ ಪಡೆಯದ ಲತಾ
ಮುಂಬೈಯ ಬ್ರೇಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಆರು ವರ್ಷಗಳ ಕಾಲ ರಾಜ್ಯಸಭಾ ಸದಸ್ಯೆ ಕೂಡಾ ಆಗಿದ್ದರು. ಆದರೆ ಈ ಹುದ್ದೆಯಲ್ಲಿರುವಾಗ ಅವರು ಒಂದೇ ಒಂದು ರೂಪಾಯಿ ವೇತನವನ್ನು ಪಡೆದಿರಲಿಲ್ಲ.
ಲತಾ ಮಂಗೇಶ್ಕರ್ ಅವರು 1999ರ ನವೆಂಬರ್ 22ರಂದು ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು 2005ರ ನವೆಂಬರ್ 21ರವರೆಗೂ ಅವರು ಆ ಹುದ್ದೆಯಲ್ಲಿದ್ದರು. ಆದರೆ ರಾಜ್ಯಸಭಾ ಸದಸ್ಯೆಯಾಗಿ ಆಕೆ ಒಂದು ರೂಪಾಯಿ ವೇತನ ಕೂಡಾ ಪಡೆದಿಲ್ಲವೆಂಬುದು ಆರ್ಟಿಐ ಅರ್ಜಿಯಿಂದ ಬಹಿರಂಗಗೊಂಡಿತ್ತು.
ಆದಾಗ್ಯೂ ಲತಾಮಂಗೇಶ್ಕರ್, ರಾಜ್ಯಸಭಾ ಕಲಾಪಗಳಿಗೆ ಗೈರು ಹಾಜರಾತಿಯ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದರು. ರಾಜ್ಯಸಭಾ ಸದಸ್ಯೆಯಾಗಿ ಆರು ವರ್ಷಗಳಲ್ಲಿ ಲತಾ ಅವರು ಕೇವಲ 12 ದಿಸ ಮಾತ್ರವೇ ಸದನದ ಕಲಾಪಗಳಿಗೆ ಹಾಜರಾಗಿದ್ದರು. ಈ ಆರು ವರ್ಷಗಳಲ್ಲಿ ಆಕೆ ಸದನದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿದ್ದರು. ರೈಲುಗಳ ಹಳಿತಪ್ಪುವಿಕೆಯ ಪ್ರಕರಣಗಳು ಹಚ್ಚುತ್ತಿರುವ ಬಗ್ಗೆ ವಿವರಣೆಯನ್ನು ಕೇಳಿದ್ದರು.
200ನೇ ಇಸವಿಯಿಂದ ಆರಂಭಗೊಂಡು ರೈಲುಗಳ ಹಳಿತಪ್ಪುವಿಕೆಯ ಘಟನೆಗಳಿಂದಾಗಿ ರೈಲ್ವೆ ಇಲಾಖೆ ಅನುಭವಿಸಿರುವ ನಷ್ಟ ಹಾಗೂ ಇಂತಹ ಘಟನೆಗಳನ್ನು ತಡೆಯಲು ಸರಕಾರ ಯಾವ ಪ್ರಯತ್ನಗಳನ್ನು ಮಾಡಿದೆಯೆಂದವರು ಪ್ರಶ್ನಿಸಿದ್ದರು.
ಸಂದರ್ಶನವೊಂದರಲ್ಲಿ ಲತಾ ಅವರು, ತಾನು ಸಂಸತ್ ಗೆ ಅರ್ಹವ್ಯಕ್ತಿಯಲ್ಲವೆಂದು ಹೇಳಿದ್ದರು. ‘ರಾಜ್ಯಸಭಾ ಸದಸ್ಯೆಯಾಗಿ ನನ್ನ ಅವಧಿಯು ಸಂತಸಕರವಾಗಿತ್ತು. ಸಂಸತ್ ಪ್ರವೇಶಿಸಲು ನನಗೆ ಮನಸ್ಸಿರಲಿಲ್ಲ. ವಾಸ್ತವಿಕವಾಗಿ ರಾಜ್ಯಸಭಾ ಸದಸ್ಯೆಯಾಗುವಂತೆ ನನ್ನನ್ನು ಒತ್ತಾಯಿಸಿದವರಿಗೆ, ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಹೇಳಿದ್ದೆ. ರಾಜಕೀಯದ ಬಗ್ಗ ನನಗೇನು ಗೊತ್ತು? ಎಂದಾಕೆ ಪ್ರಶ್ನಿಸಿದ್ದರು.
ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ನನಗೆ ಅಪಾರ ಗೌರವವಿದ್ದರೂ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವಳಲ್ಲ ಎಂದು ಆಕೆ ನ್ಯೂಸ್18 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.
ತಾನು ಪ್ರತಿನಿಧಿಸುತ್ತಿರುವ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಯಾಕೆ ಪ್ರಸ್ತಾವಿಸಿಲ್ಲ ಎಂಬ ಪ್ರಶ್ನೆಗೂ ಉತ್ತರಿಸಿದ್ದ ಅವರು, ನಾನು ಚಿತ್ರರಂಗದ ಸಮಸ್ಯೆಯ ವಿರುದ್ಧ ಧ್ವನಿಯನ್ನು ಎತ್ತಬಲ್ಲಷ್ಟು ಮಟ್ಟಿಗೆ ಮನರಂಜನಾ ಜಗತ್ತಿನ ಜೊತೆ ಸಂಪರ್ಕವನ್ನು ಹೊಂದಿಲ್ಲ. ನಾನು ಗಾಯಕಿಯೇ ಹೊರತು, ಭಾಷಣಗಾರ್ತಿಯಲ್ಲ. ಬಹುಶಃ ರಾಜ್ಯಸಭಾ ಸದಸ್ಯೆಯಾಗಿರುವ ರೇಖಾ ಅವರು ಚಿತ್ರೋದ್ಯಮವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಪ್ರಸ್ತಾವಿಸಲು ನನಗಿಂತ ಹೆಚ್ಚು ಸಮರ್ಥರಿದ್ದಾರೆ ಎಂದರು.
ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ಮೇರು ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಲತಾ ಅವರ ಗೌರವಾರ್ಥವಾಗಿ ಫೆಬ್ರವರಿ 6 ಹಾಗೂ 7ರಂದು ದೇಶದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಅರ್ಧಮಟ್ಟದಲ್ಲಿ ಹಾರಾಡಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಲತಾ ಅವರ ನಿಧನದ ಗೌರವಾರ್ಥವಾಗಿ ಮಹಾರಾಷ್ಟ್ರ ಸರಕಾರ ಸೋಮವಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
ಕನ್ನಡದಲ್ಲೂ ಲತಾ ಕಂಠಸಿರಿ
ಬಹುತೇಕ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಡಿರುವ ಲತಾ ಮಂಗೇಶ್ಕರ್ ಕನ್ನಡದಲ್ಲೂ ಗಾಯನದ ಸವಿಯುಣಿಸಿದ್ದಾರೆ. 1964ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ ಅವರು ಎರಡು ಹಾಡುಗಳನ್ನು ಹಾಡಿದ್ದರು. ಈ ಚಿತ್ರದಲ್ಲಿ ಅವರು ಹಾಡಿದ್ದ ಬೆಳ್ಳನೆ ಬೆಳಗಾಯಿತು ಆ ಕಾಲದಲ್ಲಿ ಭಾರೀ ಜನಪ್ರಿಯವಾಗಿತ್ತು. ವಿಶೇಷವೆಂದರೆ ಲತಾ ಅವರ ಜೊತೆಗೆ ಅವರ ಸೋದರಿ ಉಷಾಮಂಗೇಶ್ಕರ್, ಆಶಾಭೋಂಸ್ಲೆ ಹಾಗೂ ಹಿಂದಿಯ ಖ್ಯಾತ ಗಾಯಕ ಮನ್ನಾಡೆಯವರೂ ಕೂಡಾ ಈ ಚಿತ್ರಕ್ಕಾಗಿ ಹಾಡಿದ್ದರು.
ಸಕಲ ಸರಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ
ಭಾರತ ರತ್ನ ಲತಾಮಂಗೇಶ್ಕರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ರವಿವಾರ ಸಂಜೆ ಮುಂಬೈನ ಶಿವಾಜಿಪಾರ್ಕ್ನ ಚಿತಾಗಾರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ಠಾಕ್ರೆ, ಬಾಲಿವುಡ್ ತಾರೆಯರಾದ ಶಾರುಕ್ ಖಾನ್,ವಿದ್ಯಾಬಾಲನ್ ಹಾಗೂ ರಣಬೀರ್ಕಪೂರ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಅಗಲಿದ ಮಹಾನ್ ಗಾಯಕಿಯ ಪಾರ್ಥಿವ ಶರೀರಕ್ಕೆ ಅಂತಿಮನಮನ ಸಲ್ಲಿಸಿದರು. ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ ಮಂಗೇಶ್ಕರ್ ಅವರು ಸೋದರಿಯ ಪಾರ್ಥಿವಶರೀರವಿರುವ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.