ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ಸ್‌ ಜ್ಯೋತಿ ಹಿಡಿದು ಮುನ್ನಡೆದ ಚೀನಾದ ʼಉಯ್ಗುರ್ ಮುಸ್ಲಿಂʼ ಸಮುದಾಯದ ಕ್ರೀಡಾಳು

Update: 2022-02-06 13:23 GMT
Photo: Twitter/olympickhel

ಬೀಜಿಂಗ್: ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭ ಅಲ್ಲಿನ ಬಡ್ರ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಾಗ ಎಲ್ಲರ ಗಮನ ಸೆಳೆದಿದ್ದು ಒಲಿಂಪಿಕ್ಸ್ ಜ್ಯೋತಿಯನ್ನು ಹಿಡಿಯುವ ಅವಕಾಶ ಪಡೆದ 20 ವರ್ಷದ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಕ್ರೀಡಾಳು ಡಿನಿಗೀರ್ ಯಿಲಾಮುಜಿಯಾಂಗ್.

ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಈಕೆಯ ದೀರ್ಘಕಾಲದ ಕನಸು ನನಸಾಗುವುದರ ಜತೆಗೆ ಆಕೆ ಅ ದೇಶದ ಮುಸ್ಲಿಂ ಉಯ್ಗುರ್ ಅಲ್ಪಸಂಖ್ಯಾತ ಸಮುದಾಯದವಳು ಎಂಬುದು ವಿಶೇಷ. ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ದೇಶದ ಆಡಳಿತ ಕನಿಷ್ಠ 10 ಲಕ್ಷ ಉಯ್ಗುರ್ ಮುಸ್ಲಿಮರನ್ನು ದಿಗ್ಬಂಧನದಲ್ಲಿರಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂಬ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ವ್ಯಾಪಕ ಟೀಕೆಯನ್ನು ಎದುರಿಸುತ್ತಿರುವ ನಡುವೆ ಅದೇ ಸಮುದಾಯದ ಕ್ರೀಡಾಳುವೊಬ್ಬರು ವಿಂಟರ್ ಒಲಿಂಪಿಕ್ಸ್ ಜ್ಯೋತಿಯನ್ನು ಹಿಡಿಯುವುದರ ಮೂಲಕ ಚೀನಾ ತನ್ನ ವಿರೋಧಿಗಳಿಗೆ ಉತ್ತರ ನೀಡಲು ಹೊರಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಆಕೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಸಂದರ್ಭ ಆಕೆಯ ಕುಟುಂಬ ಟಿವಿ ಪರದೆಯಲ್ಲಿ ಅದನ್ನು ನೋಡುತ್ತಾ ಸಂತೋಷದಿಂದ ಚಪ್ಪಾಳೆ ತಟ್ಟುತ್ತಾ ಆನಂದಭಾಷ್ಪ ಸುರಿಸುತ್ತಿರುವ ವೀಡಿಯೋಗಳನ್ನು ಹಲವಾರು ಚೀನೀ ಅಧಿಕಾರಿಗಳು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದ್ದಾರೆ.

ತನ್ನ 12ನೇ ವರ್ಷದಲ್ಲಿ ಸ್ಕೀ ತರಬೇತಿ ಪಡೆಯಲು ಆರಂಭಿಸಿದ್ದ ಯಿಲಮುಜಿಯಾಂಗ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಪರಿಣತ ತನ್ನ ತಂದೆಯ ಗರಡಿಯಲ್ಲಿಯೇ ಪಳಗಿದ್ದಳು. 2017ರಲ್ಲಿ ಚೀನಾದ ಕ್ರಾಸ್ ಕಂಟ್ರಿ ಸ್ಕೀಯಿಂಗ್ ತಂಡ ಸೇರಿದ  ಅವಳು ನಾರ್ವೇಯಲ್ಲಿ ಮೂರು ವರ್ಷ ತರಬೇತಿ ಪಡೆದಿದ್ದಾಳೆ.

2019ರಲ್ಲಿ ಅಂತರಾಷ್ಟ್ರೀಯ ಸ್ಕಿ ಫೆಡರೇಶನ್ ಮಟ್ಟದ ಸ್ಪರ್ಧೆಯಲ್ಲಿ ಗೆದ್ದ ಪ್ರಥಮ ಚೀನೀ ಕ್ರೀಡಾಳು ಎಂಬ ಹೆಗ್ಗಳಿಕೆಗೆ ಆಕೆ ಪಾತ್ರಳಾದಳು. ಕಳೆದ ವರ್ಷದ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಆಕೆ ಟೀಂ ಸ್ಪ್ರಿಂಟ್‍ನಲ್ಲಿ 13ನೇ ಮತ್ತು 10ಕಿಮೀ ಸ್ಪರ್ಧೆಯಲ್ಲಿ 41ನೇ ಸ್ಥಾನ ಪಡೆದಿದ್ದಾಳೆ.

ಶನಿವಾರ ವಿಂಟರ್ ಒಲಿಂಪಿಕ್ಸ್ ಭಾಗವಾಗಿ ನಡೆದ ಸ್ಕಿಯಾಥ್ಲಾನ್‍ನಲ್ಲಿ ಆಕೆ 43ನೇ ಸ್ಥಾನ ಪಡೆದಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News