ನಾನು ಗುಂಡು ಹಾರಿಸುವುದನ್ನು ನೋಡಿದ್ದ ಉವೈಸಿ ಕೆಳಕ್ಕೆ ಬಗ್ಗಿದ್ದರು,ನಾನು ಕಾರಿನ ಕೆಳಭಾಗಕ್ಕೆ ಗುಂಡಿಕ್ಕಿದ್ದೆ: ಆರೋಪಿ

Update: 2022-02-06 15:38 GMT

ಹೊಸದಿಲ್ಲಿ,ಫೆ.6: ‘ಛಜರ್ಸಿ ಟೋಲ್ ಪ್ಲಾಝಾದ ಸಮೀಪ ಉವೈಸಿ ಪ್ರಯಾಣಿಸುತ್ತಿದ್ದ ಕಾರು ನಿಧಾನಗೊಂಡಿತ್ತು. ನಾನು ಮೊದಲ ಗುಂಡು ಹಾರಿಸಿದ್ದನ್ನು ಉವೈಸಿ ಕಂಡಿದ್ದರು ಮತ್ತು ತನ್ನ ಜೀವವನ್ನು ಉಳಿಸಿಕೊಳ್ಳಲು ಕೆಳಕ್ಕೆ ಬಗ್ಗಿದ್ದರು. ಆಗ ನಾನು ಕಾರಿನ ಕೆಳಭಾಗಕ್ಕೆ ಗುಂಡು ಹಾರಿಸಿದ್ದೆ. ಅವರು ಸತ್ತಿದ್ದಾರೆಂದು ನಾನು ಭಾವಿಸಿದ್ದೆ ’ ಎಂದು ಬಂಧಿತ ಇಬ್ಬರು ಆರೋಪಿಗಳಲ್ಲೋರ್ವನಾದ ಸಚಿನ್ ಶರ್ಮಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಲೋಕಸಭಾ ಸದಸ್ಯ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿಯವರು ಗುರುವಾರ ಸಂಜೆ ಉ.ಪ್ರದೇಶ ಚುನಾವಣಾ ಪ್ರಚಾರ ಮುಗಿಸಿಕೊಂಡು ಮೀರತ್ನಿಂದ ದಿಲ್ಲಿಗೆ ವಾಪಸಾಗುತ್ತಿದ್ದಾಗ ಹಾಪುರ್ ಜಿಲ್ಲೆಯ ಪಿಲ್ಖುವಾದ ಛಜರ್ಸಿ ಟೋಲ್ಪ್ಲಾಝಾದ ಬಳಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಆರೋಪಿಗಳಾದ ಸಚಿನ್ ಶರ್ಮಾ ಮತ್ತು ಶುಭಂ ಎನ್ನುವವರನ್ನು ಬಂಧಿಸಿರುವ ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ಮೂರು ಬಾರಿ ಉವೈಸಿ ಮೇಲೆ ದಾಳಿಗೆ ಪ್ರಯತ್ನಿಸಿದ್ದರಾದರೂ ಜನಸಂದಣಿಯಿಂದಾಗಿ ವಿಫಲಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಆರೋಪಿಗಳು ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿರಲಿಲ್ಲ. ಆದರೆ ಘಟನೆಯ ದೃಶ್ಯ ಸಿಸಿಟಿವಿಯಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದಾಗ ಕ್ಷಮೆ ಯಾಚಿಸಿದ ಸಚಿನ್,ಏನು ನಡೆದಿತ್ತು ಎನ್ನುವುದನ್ನು ವಿವರಿಸಿದ್ದಾನೆ ಎಂದು ಎಫ್ಐ ಆರ್ನಲ್ಲಿ ಹೇಳಲಾಗಿದೆ.

‘ನಾನು ದೊಡ್ಡ ರಾಜಕಾರಣಿಯಾಗಲು ಬಯಸಿದ್ದೆ. ನಾನೋರ್ವ ನಿಜವಾದ ದೇಶಭಕ್ತ ಎಂದು ನಾನು ಭಾವಿಸಿದ್ದೇನೆ. ಉವೈಸಿಯವರ ಭಾಷಣಗಳು ದೇಶಕ್ಕೆ ಹಾನಿಕರ ಎಂದು ನಾನು ತಿಳಿದಿದ್ದೆ. ನನ್ನ ಮನಸ್ಸಿನಲ್ಲಿ ಅವರ ವಿರುದ್ಧ ದ್ವೇಷ ಬೆಳೆದಿತ್ತು. ಉವೈಸಿಯವರ ಭೇಟಿಗಳ ಬಗ್ಗೆ ತಿಳಿದುಕೊಳ್ಳಲು ನಾನು ಎಐಎಂಐಎಂನ ದಸ್ನಾ ಘಟಕದ ಅಧ್ಯಕ್ಷರೊಂದಿಗೆ ಸಂಪರ್ಕ ಹೊಂದಿದ್ದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉವೈಸಿ ಮೇಲೆ ದಾಳಿ ನಡೆಸಲು ನಿರ್ಧರಿಸಿದ್ದೆ. ಬಳಿಕ ತನಗೆ ಹಲವಾರು ವರ್ಷಗಳಿಂದಲೂ ಪರಿಚಿತನಾಗಿರುವ ಸಹಾರನ್ಪುರ ನಿವಾಸಿ ಶುಭಮ್ನನ್ನು ಸಂಪರ್ಕಿಸಿದ್ದೆ ’ಎಂದು ಸಚಿನ್ ಪೊಲೀಸರಿಗೆ ತಿಳಿಸಿದ್ದಾನೆ.

‘ನನ್ನ ಕರೆಯ ಮೇರೆಗೆ ಶುಭಂ ಘಾಜಿಯಾಬಾದ್ ಗೆ ಆಗಮಿಸಿದ್ದ ಮತ್ತು ಜ.28ರಂದು ವೇವ್ ಸಿಟಿ ಬಳಿ ನಾವಿಬ್ಬರೂ ಭೇಟಿಯಾಗಿದ್ದೆವು. ಶುಭಂ ತನ್ನ ಸ್ನೇಹಿತನೊಂದಿಗೆ ಉಳಿದುಕೊಂಡಿದ್ದ. ಉವೈಸಿಯನ್ನು ಕೊಲ್ಲಲು ನಿರ್ಧರಿಸಿದ ನಾವು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು ’ಎಂದು ಸಚಿನ್ ಪೊಲೀಸರಿಗೆ ತಿಳಿಸಿದ್ದಾಗಿ ಎಫ್ಐಆರ್ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News