×
Ad

ಮೊರಕ್ಕೊ: 32 ಅಡಿ ಬಾವಿಯೊಳಗೆ ಬಿದ್ದ ಬಾಲಕನ ರಕ್ಷಣಾ ಕಾರ್ಯ ವಿಫಲ

Update: 2022-02-06 23:08 IST

ಜೆದ್ದಾ, ಫೆ.6: ಮೊರೊಕ್ಕೊದಲ್ಲಿ 4 ದಿನದ ಹಿಂದೆ 32 ಅಡಿ ಆಳದ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ರಯಾನ್ ಅವ್ರಾಮ್‌ನ ರಕ್ಷಣಾ ಕಾರ್ಯ ದುರಂತಮಯ ಅಂತ್ಯಕಂಡಿದ್ದು ಬಾಲಕ ಮೃತಪಟ್ಟಿರುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಬಾಲಕ ರಯಾನ್ ಮೃತಪಟ್ಟಿರುವುದನ್ನು ಮೊರೊಕ್ಕದ ರಾಜಭವನವೂ ದೃಢಪಡಿಸಿದೆ. ರಯಾನ್‌ನ ಹೆತ್ತವರಾದ ಖಾಲಿದ್ ಅವ್ರಾಮ್ ಮತ್ತು ವಸೀಮಾ ಖೆರ್ಶೀಷ್‌ಗೆ ದೂರವಾಣಿ ಕರೆ ಮಾಡಿರುವ ಮೊರೊಕ್ಕದ ದೊರೆ 6ನೇ ಮುಹಮ್ಮದ್ ಬಾಲಕನ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ. ‌

ರಯಾನ್ ಮಂಗಳವಾರ ಚೆಫ್‌ಶೀವನ್ ಬಳಿಯ ಬೆಟ್ಟದಿಂದ 32 ಅಡಿ ಆಳದ ಬಾವಿಗೆ ಬಿದ್ದಿದ್ದ. ಈತನನ್ನು ಜೀವಂತವಾಗಿ ರಕ್ಷಿಸುವ ಕಾರ್ಯಾಚರಣೆ 4 ದಿನ ನಿರಂತರ ನಡೆದಿತ್ತು. ಜೆಸಿಬಿ ಮತ್ತು ಕ್ರೇನ್ ಬಳಸಿ ಬಾವಿಯ ಬಳಿ ಅಷ್ಟೇ ಆಳದ ಹೊಂಡ ತೋಡುವ ಕಾರ್ಯಾಚರಣೆಗೆ ಕಲ್ಲು ಬಂಡೆಗಳು ಅಡ್ಡಿಯಾಗಿದ್ದವು. ಜತೆಗೆ ಬಾವಿಯೊಳಗೆ ಮಣ್ಣು ಕುಸಿಯುವ ಅಪಾಯವೂ ಎದುರಾಗಿದ್ದರಿಂದ ಅತ್ಯಂತ ಜಾಗರೂಕತೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು. ಈ ರಕ್ಷಣಾ ಕಾರ್ಯಾಚರಣೆ ಟಿವಿ ವಾಹಿನಿಗಳಲ್ಲಿ ನೇರಪ್ರಸಾರ ನಡೆದಿದ್ದು ವಿಶ್ವದಾದ್ಯಂತದ ಕೋಟ್ಯಾಂತರ ಮಂದಿ ಬಾಲಕ ಸುರಕ್ಷಿತವಾಗಿ ಹೊರಬರಲಿ ಎಂದು ಹಾರೈಸಿದ್ದರು. ಹಗ್ಗದ ಮೂಲಕ ನೀರು, ಆಮ್ಲಜನಕ ಹಾಗೂ ಒಂದು ಕ್ಯಾಮೆರಾವನ್ನು ಬಾವಿಯೊಳಗೆ ಇಳಿಸಲಾಗಿತ್ತು.

ಕಡೆಗೂ 4 ದಿನದ ಕಾರ್ಯಾಚರಣೆಯ ಬಳಿಕ ಬಾಲಕ ಸಿಲುಕಿಬಿದ್ದಿದ್ದ ಸ್ಥಳವನ್ನು ರಕ್ಷಣಾ ಕಾರ್ಯಕರ್ತರು ತಲುಪಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕ ರಯಾನ್ ಕೊನೆಯುಸಿರು ಎಳೆದಿದ್ದ. ಮೃತದೇಹವನ್ನು ಹೆಲಿಕಾಪ್ಟರ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಆತ ಮೃತಪಟ್ಟಿರುವುದನ್ನು ಅಧಿಕೃತವಾಗಿ ಘೋಷಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News