×
Ad

ಕಾಶ್ಮೀರ ಕುರಿತ ಸಾಕ್ಷ್ಯಚಿತ್ರಕ್ಕೂ ರಶ್ಯಾ ಸರಕಾರಕ್ಕೂ ಸಂಬಂಧವಿಲ್ಲ: ರಾಯಭಾರ ಕಚೇರಿ ಸ್ಪಷ್ಟನೆ

Update: 2022-02-06 23:33 IST

ಮಾಸ್ಕೊ, ಫೆ.6: ರಶ್ಯಾ ಬೆಂಬಲಿತ ಎಂದು ಹೇಳಲಾದ ಡಿಜಿಟಲ್ ಸಂಸ್ಥೆಯೊಂದು ಕಾಶ್ಮೀರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿರುವ ವಿವಾದಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿರುವ ಭಾರತದಲ್ಲಿನ ರಶ್ಯಾ ರಾಯಭಾರ ಕಚೇರಿ, ಈ ಸಾಕ್ಷ್ಯಚಿತ್ರಕ್ಕೂ ರಶ್ಯಾ ಸರಕಾರಕ್ಕೂ ಸಂಬಂಧವಿಲ್ಲ ಎಂದಿದೆ. ಕಾಶ್ಮೀರವು ಹೊಸ ಪೆಲೆಸ್ತೀನ್ ಆಗುತ್ತಿದೆ ಎಂದು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಶ್ಯಾದ ರಾಯಭಾರ ಕಚೇರಿ, ಈ ಪ್ರದೇಶದ ವಿವಾದವು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿವಾದವಾಗಿದೆ ಎಂದು ಹೇಳಿದೆ. 

‘ಕಾಶ್ಮೀರ್: ಹೊಸ ಪೆಲೆಸ್ತೀನ್‌ನ ಹಾದಿಯಲ್ಲಿ’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರದ ಕುರಿತು ಜರ್ಮನ್ ಮೂಲದ ಡಿಜಿಟಲ್ ವೀಡಿಯೊ ಸಂಸ್ಥೆ ರೆಡ್‌ಫಿಶ್ ಮೀಡಿಯಾ ವೀಡಿಯೊ ಮೂಲಕ ಮಾಹಿತಿ ನೀಡಿದ್ದು, ಈ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ‘ಕಾಶ್ಮೀರವು ವಸಾಹತುಶಾಹಿ ರಾಜ್ಯವಾಗುವತ್ತ ಧಾವಿಸುತ್ತಿದೆ’ ಎಂದು ಪ್ರತಿಪಾದಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಫೆಬ್ರವರಿ 9ರಂದು 9:30ಕ್ಕೆ(ಭಾರತೀಯ ಕಾಲಮಾನ) ಪ್ರಸಾರ ಮಾಡುವುದಾಗಿ ಸಂಸ್ಥೆ ಹೇಳಿದೆ. ಜತೆಗೆ, ರೆಡ್‌ಫಿಶ್ ಮೀಡಿಯಾವು ರಶ್ಯಾ ಬೆಂಬಲಿತ ಸಂಸ್ಥೆ ಎಂದೂ ಹೇಳಲಾಗಿತ್ತು. ಶನಿವಾರ ಮತ್ತೊಂದು ಟ್ರೇಲರ್ ಬಿಡುಗಡೆಗೊಳಿಸಿದ ರೆಡ್‌ಫಿಶ್ ಮೀಡಿಯಾ, ಸಾಕ್ಷ್ಯಚಿತ್ರವು ‘ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯ ದೃಷ್ಟಿಕೋನ’ವನ್ನೂ ಒಳಗೊಂಡಿದೆ ಎಂದು ಘೋಷಿಸಿತ್ತು. ಇದು ತಪ್ಪು ಹಾದಿಗೆ ಎಳೆಯುವ ಮಾಹಿತಿ ಎಂದು ರಶ್ಯಾದ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ರೆಡ್‌ಫಿಶ್ ಸ್ವತಂತ್ರ ಸಂಪಾದಕೀಯ ಕಾರ್ಯನೀತಿಯನ್ನು ಹೊಂದಿದ್ದರೂ, ಈ ಪ್ರಸ್ತಾವಿತ ಸಾಕ್ಷ್ಯಚಿತ್ರವು ಕಾಶ್ಮೀರದ ವಿಷಯದ ಸಂಕೀರ್ಣ, ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿ ಸಮತೋಲಿತ ಅನುಸಂಧಾನವನ್ನು ಅನುಸರಿಸಲಿದೆ ಎಂಬ ವಿಶ್ವಾಸವಿದೆ. ವೃತ್ತಿಪರ ಮಾಧ್ಯಮ ಸಂಸ್ಥೆಯಿಂದ ಇಂತಹ ಉಪಕ್ರಮವನ್ನು ನಿರೀಕ್ಷಿಸುವುದಾಗಿ ರಶ್ಯಾ ರಾಯಭಾರ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News