ಲತಾ ಮಂಗೇಶ್ಕರ್‌ಗೆ ನಿಧನಕ್ಕೆ ಪಾಕಿಸ್ತಾನದಲ್ಲಿ ಶೋಕಾಚರಣೆ

Update: 2022-02-06 18:09 GMT

ಇಸ್ಲಮಾಬಾದ್, ಫೆ.6: ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ಭಾರತದಲ್ಲಿ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಶೋಕಾಚರಣೆ ನಡೆಸಲಾಗಿದ್ದು ಪಾಕಿಸ್ತಾನದಲ್ಲಿ ಟ್ವಿಟರ್‌ನಲ್ಲಿ ಲತಾ ಅವರ ನಿಧನದ ಸುದ್ಧಿ ಅತ್ಯಂತ ಟ್ರೆಂಡಿಂಗ್ ವಿಷಯವಾಗಿತ್ತು. ಲತಾ ನಿಧನದಿಂದ ಯುಗವೊಂದು ಅಂತ್ಯವಾಗಿದೆ. ಅವರು ದಶಕಗಳ ಕಾಲ ಸಂಗೀತ ಲೋಕವನ್ನು ಆಳಿದ ಮಧುರಕಂಠದ ಗಾಯಕಿ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪಾಕಿಸ್ತಾನದ ಖ್ಯಾತ ಗಾಯಕಿ ನೂರ್‌ಜಹಾನ್‌ರೊಂದಿಗೆ ಲತಾರನ್ನು ಹೋಲಿಸಲಾಗುತ್ತಿತ್ತು ಎಂದು ಇಸ್ಲಮಾಬಾದ್‌ನಲ್ಲಿ ಕೆಲವರು ಸಂತಾಪ ಸೂಚಿಸುವ ವೀಡಿಯೊವನ್ನು ಬಿಬಿಸಿ ನ್ಯೂಸ್ ಪಂಜಾಬ್(ಪಾಕ್ ಪ್ರಾಂತ) ಪ್ರಸಾರ ಮಾಡಿದೆ. 

ಗಾನಕೋಗಿಲೆ ಲತಾ ಮಂಗೇಶ್ಕರ್ ಭಾರತದಷ್ಟೇ ಖ್ಯಾತಿಯನ್ನು ಪಾಕಿಸ್ತಾನ ಹಾಗೂ ವಿಶ್ವದ ಇತರೆಡೆಯೂ ಪಡೆದಿದ್ದರು ಎಂದು ಸಾಹಿತಿ, ಅಂಕಣಕಾರ ದೂರ್ದಾನ ನಝಮ್ ಹೇಳಿದ್ದಾರೆ. ಲತಾ ನಮ್ಮೆಲ್ಲರ ಆತ್ಮೀಯ ಸಹೋದರಿಯಾಗಿದ್ದರು. ಅವರ ನಿಧನದಿಂದ ಯುಗಾಂತ್ಯವಾಗಿದೆ ಎಂದು ರಾಜಕೀಯ ವಿಶ್ಲೇಷಕ ಡಾ. ಶಾಹಿದ್ ಮಸೂದ್ ಸಂತಾಪ ಸೂಚಿಸಿದ್ದಾರೆ. ಪಾಕ್ ನಟ ಇಮ್ರಾನ್ ಅಬ್ಬಾಸ್, ಗಾಯಕಿ ಹುಮೈರಾ ಅರ್ಷದ್, ಪತ್ರಕರ್ತ ನಝೀರ್ ಲೆಘಾರಿ, ಪಾಕಿಸ್ತಾನದ ದಿನಪತ್ರಿಕೆ ‘ಡಾನ್’ 
ಸಹಿತ ಹಲವಾರು ಪಾಕಿಸ್ತಾನದ ಅಭಿಮಾನಿಗಳು ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News