ಕೋವಿಡ್ ಲಸಿಕೆ ವಿರುದ್ಧ ಟ್ರಕ್ ಚಾಲಕರ ಪ್ರತಿಭಟನೆ: ಕೆನಡಾದ ಒಟ್ಟಾವದಲ್ಲಿ ತುರ್ತು ಪರಿಸ್ಥಿತಿ

Update: 2022-02-07 18:13 GMT

ಟೊರಂಟೊ, ಫೆ.7: ಕೋವಿಡ್ ಲಸಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಕೆನಡಾದ ರಾಜಧಾನಿ ಒಟ್ಟಾವದಲ್ಲಿ ಟ್ರಕ್ ಚಾಲಕರು ನಡೆಸುತ್ತಿರುವ ಪ್ರತಿಭಟನೆ ನಿಯಂತ್ರಣ ತಪ್ಪಿದೆ ಎಂದು ಒಟ್ಟಾವದ ಮೇಯರ್ ಹೇಳಿದ್ದು, ನಗರದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದಾಗಿ ರವಿವಾರ ಘೋಷಿಸಿದ್ದಾರೆ.

 ಕೋವಿಡ್ ಲಸಿಕೆ ಕಡ್ಡಾಯವನ್ನು ವಿರೋಧಿಸಿರುವ ಟ್ರಕ್ ಡ್ರೈವರ್ಗಳು ನಡೆಸಿದ ಜಾಥಾ ಜನವರಿ 29ರಂದು ಒಟ್ಟಾವ ತಲುಪಿತ್ತು. ಅಲ್ಲಿ ರಸ್ತೆಯ ಮೇಲೆ ತಮ್ಮ ಟ್ರಕ್ಗಳನ್ನು ನಿಲ್ಲಿಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದ ಪ್ರತಿಭಟನಾಕಾರರು, ರಸ್ತೆಯ ಬದಿಯಲ್ಲಿಯೇ ತಾತ್ಕಾಲಿಕ ಡೇರೆ ಹಾಕಿಕೊಂಡು ಮುಷ್ಕರ ನಡೆಸಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಪೊಲೀಸ್ ಸಿಬಂದಿಗಳಿಂತ ಹಲವು ಪಟ್ಟು ಹೆಚ್ಚು ಪ್ರತಿಭಟನಾಕಾರರು ನೆರೆದಿರುವುದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಈ ಯುದ್ಧದಲ್ಲಿ ನಮಗೆ ಹಿನ್ನಡೆಯಾಗಿರುವುದು ಸ್ಪಷ್ಟವಾಗಿದೆ. ಈ ಸ್ಥಿತಿ ಮುಂದುವರಿಯಲು ಬಿಡಬಾರದು. ನಗರ ಮತ್ತೆ ಮೊದಲಿನ ಸ್ಥಿತಿಗೆ ಮರಳಬೇಕು. ಜನಜೀವನ ಸಹಜ ಸ್ಥಿತಿಗೆ ಮರಳಬೇಕು ಎಂಬ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಎಂದು ಒಟ್ಟಾವದ ಮೇಯರ್ ಜಿಮ್ ವಾಟ್ಸನ್ ಘೋಷಿಸಿದ್ದಾರೆ.

  ಭಾವನಾಶೂನ್ಯತೆ ಹೊಂದಿರುವ ಟ್ರಕ್ ಚಾಲಕರು ನಿರಂತರ ಹಾರ್ನ್ , ಸೈರನ್ ಮೊಳಗಿಸುತ್ತಾ, ಪಟಾಕಿ ಸಿಡಿಸುತ್ತಾ ನಗರದ ನೆಮ್ಮದಿಯನ್ನು ಕೆಡಿಸಿ ಮೋಜಿನ ಕೂಟವನ್ನಾಗಿಸಿದ್ದಾರೆ ಎಂದು ವಾಟ್ಸನ್ ಖಂಡಿಸಿದ್ದಾರೆ. ಟ್ರಕ್ಗಳು ಅಮೆರಿಕ-ಕೆನಡಾ ಗಡಿ ದಾಟಬೇಕಿದ್ದರೆ ಚಾಲಕರು ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂಬ ನಿಯಮವನ್ನು ವಿರೋಧಿಸಿ ಪ್ರತಿಭಟನೆ ಆರಂಭವಾಗಿತ್ತು. ಇದರ ಜತೆ ಕೊರೋನ ನಿರ್ಬಂಧ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಹಾಗೂ ಪ್ರಧಾನಿ ಜಸ್ಟಿನ್ ಟ್ರೂಡೊ ಸರಕಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಸೇರಿಕೊಂಡು ವ್ಯಾಪಕ ರೀತಿಯಲ್ಲಿ ಪ್ರತಿಭಟನೆ ಮುಂದುವರಿದಿದೆ.
 
ಈ ಮಧ್ಯೆ, ಪ್ರತಿಭಟನಾ ನಿರತರಿಗೆ ಗ್ಯಾಸ್, ನೀರು ಮತ್ತಿತರ ಸವಲತ್ತುಗಳನ್ನು ಒದಗಿಸದಂತೆ ಪೊಲೀಸರು ರವಿವಾರ ಸ್ಥಳೀಯರನ್ನು ಎಚ್ಚರಿಸಿದ್ದು ಪ್ರತಿಭಟನಾ ನಿರತರಿಗೆ ನೆರವಾಗುವವರನ್ನು ಬಂಧಿಸಲಾಗುವುದು ಎಂದು ಘೋಷಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News