ಮ್ಯಾನ್ಮಾರ್: ಸೇನಾಡಳಿತ ವಿರೋಧಿಸಿದ ಸದಸ್ಯರೊಂದಿಗೆ ಸಂಬಂಧ ಕಡಿದುಕೊಳ್ಳುತ್ತಿರುವ ಕುಟುಂಬಗಳು

Update: 2022-02-07 18:21 GMT

ಯಾಂಗಾನ್, ಫೆ.7: ಮ್ಯಾನ್ಮಾರ್ ನಲ್ಲಿ ಸೇನಾಡಳಿತವನ್ನು ಬಹಿರಂಗವಾಗಿ ವಿರೋಧಿಸುವ ಕುಟುಂಬದ ಸದಸ್ಯರ ಜತೆಗಿನ ಸಂಬಂಧವನ್ನು ಕಡಿದುಕೊಳ್ಳುವ ಪ್ರಕ್ರಿಯೆ ಕಳೆದ 3 ತಿಂಗಳಿಂದ ಗಮನಾರ್ಹವಾಗಿ ಹೆಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2021ರ ನವೆಂಬರ್ ಬಳಿಕ, ಪ್ರತೀ ದಿನ ಸರಾಸರಿ 7 ಕುಟುಂಬಗಳು, ಸೇನಾಡಳಿತವನ್ನು ಬಹಿರಂಗವಾಗಿ ವಿರೋಧಿಸಿದ ತಮ್ಮ ಪುತ್ರ, ಪುತ್ರಿ, ಸೊಸೆ, ಸೋದರಳಿಯ ಅಥವಾ ಮೊಮ್ಮಕ್ಕಳ ಜತೆಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಸರಕಾರಿ ಸ್ವಾಮ್ಯದ ದಿನಪತ್ರಿಕೆಗಳಲ್ಲಿ ನೋಟಿಸ್ ನೀಡುತ್ತಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ್ದ ಸೇನೆಯು ಆಡಳಿತವನ್ನು ವಶಕ್ಕೆ ಪಡೆದಿತ್ತು. ಇದನ್ನು ವಿರೋಧಿಸಿ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆದಿದ್ದು ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆ ನಿರ್ದಯ ಕಾರ್ಯಾಚರಣೆ ನಡೆಸಿತ್ತು. ಈ ಮಧ್ಯೆ, ಪ್ರತಿಭಟನೆ ನಡೆಸಿದವರ ಆಸ್ತಿಯನ್ನು ಜಫ್ತಿ ಮಾಡುವುದಾಗಿ ಮತ್ತು ಪ್ರತಿಭಟನಾಕಾರರಿಗೆ ಆಶ್ರಯ ನೀಡುವ ಜನರನ್ನು ಬಂಧಿಸುವುದಾಗಿ ಸೇನಾಡಳಿತ ಕಳೆದ ನವೆಂಬರ್ನಲ್ಲಿ ಘೋಷಿಸಿತ್ತು. ಅಲ್ಲದೆ ಹಲವೆಡೆ ದಾಳಿ ಮತ್ತು ಶೋಧ ಕಾರ್ಯಾಚರಣೆಯೂ ನಡೆದಿದೆ. ಸೇನೆಯ ಈ ಉಪಕ್ರಮದ ಬಳಿಕ ಸೇನಾಡಳಿತವನ್ನು ವಿರೋಧಿಸಿದ ಸದಸ್ಯರೊಂದಿಗೆ ಸಂಬಂಧ ಕಡಿದುಕೊಳ್ಳುವ ಸುಮಾರು 570 ನೋಟಿಸ್ಗಳು ಪ್ರಕಟವಾಗಿವೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

1980 ಮತ್ತು 2007ರಲ್ಲಿ ನಡೆಸಿದ ಸೇನಾಕ್ರಾಂತಿಯ ಸಂದರ್ಭವೂ ಮ್ಯಾನ್ಮಾರ್ನ ಸೇನಾಡಳಿತ ವಿರೋಧಿಗಳ ಸೊಲ್ಲಡಗಿಸಲು ಅವರ ಕುಟುಂಬದ ವಿರುದ್ಧ ಕಾರ್ಯಾಚರಣೆಯ ತಂತ್ರ ಹೂಡಿತ್ತು. ಆದರೆ ಈ ಬಾರಿಯ ಕಾರ್ಯಾಚರಣೆ ವ್ಯಾಪಕವಾಗಿದೆ ಎಂದು ಬ್ರಿಟನ್ನ ಗ್ರೂಫ್ ಬರ್ಮಾ ಅಭಿಯಾನದ ಉನ್ನತ ಸಲಹೆಗಾರ ವಾಯ್ ಹಿನ್ ಥಾನ್ ಹೇಳಿದ್ದಾರೆ. ಕಳೆದ ನವೆಂಬರ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಸೇನೆಯ ವಕ್ತಾರ ಝಾವ್ ಮಿನ್ ಟುನ್, ಒಂದು ವೇಳೆ ವಿರೋಧಿಗಳನ್ನು ಬೆಂಬಲಿಸಿರುವುದು ದೃಢಪಟ್ಟರೆ, ದಿನಪತ್ರಿಕೆಯಲ್ಲಿ ಘೋಷಣೆ ಮಾಡಿದ ಜನರನ್ನೂ ಬಂಧಿಸಲಾಗುವುದು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News