×
Ad

ಟೆಕ್ಸಾಸ್ ಚರ್ಚ್ ಗುಂಡಿನ ದಾಳಿ ಪ್ರಕರಣ: 230 ಮಿಲಿಯನ್ ಡಾಲರ್ ಪರಿಹಾರ ನೀಡಲು ಅಮೆರಿಕ ವಾಯುಪಡೆಗೆ ಆದೇಶ

Update: 2022-02-08 23:31 IST

ವಾಷಿಂಗ್ಟನ್, ಫೆ.8: ಅಮೆರಿಕದ ಟೆಕ್ಸಾಸ್‌ನ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ 2017ರಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರ ಕುಟುಂಬದವರಿಗೆ ಹಾಗೂ ಬಂಧುಗಳಿಗೆ 230 ಮಿಲಿಯನ್ ಡಾಲರ್ಗೂ ಅಧಿಕ ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ಅಮೆರಿಕದ ವಾಯುಪಡೆಗೆ ಅಲ್ಲಿನ ಫೆಡರಲ್ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಪ್ರಕರಣದ ಅಪರಾಧಿಯ ಕ್ರಿಮಿನಲ್ ಹಿನ್ನಲೆಯ ಬಗ್ಗೆ ಮಾಹಿತಿ ನೀಡಲು ವಿಫಲವಾಗಿರುವ ವಾಯುಪಡೆ ಪರಿಹಾರ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯದ ತೀರ್ಪು ತಿಳಿಸಿದೆ. ಡೆವಿನ್ ಪ್ಯಾಟ್ರಿಕ್ ಕೆಲ್ಲಿ ಎಂಬಾತ 2017ರ ನವೆಂಬರ್ನಲ್ಲಿ ಟೆಕ್ಸಾಸ್‌ನ ಚರ್ಚ್ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟು ಇತರ 22 ಮಂದಿ ಗಾಯಗೊಂಡಿದ್ದರು. 

ಲೈಸೆನ್ಸ್ ಇದ್ದ ಬಂದೂಕಿನಿಂದ ಕೆಲ್ಲಿ ಗುಂಡು ಹಾರಿಸಿದ್ದ. ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ. ಈ ಹಿಂದೆ ಕ್ರಿಮಿನಲ್ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದ ಕೆಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗೂ ಒಳಗಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.


ಅಮೆರಿಕದ ಕಾನೂನಿನ ಪ್ರಕಾರ, ಕ್ರಿಮಿನಲ್ ಅಪರಾಧದ ಹಿನ್ನಲೆಯುಳ್ಳವರಿಗೆ ಬಂದೂಕು ಲೈಸೆನ್ಸ್ ನೀಡುವಂತಿಲ್ಲ. ಆದರೆ 5 ವರ್ಷದ ಹಿಂದೆ ಕೆಲ್ಲಿ ವಿರುದ್ಧದ 2 ಕೌಟುಂಬಿಕ ಹಿಂಸೆ ಅಪರಾಧದ ಬಗ್ಗೆ ಅಮೆರಿಕದ ವಾಯುಪಡೆ ಎಫ್ಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಆದ್ದರಿಂದ ಕೆಲ್ಲಿ ಬಂದೂಕು ಲೈಸೆನ್ಸ್ ಪಡೆದಿದ್ದಾನೆ. ಈ ಕಾರಣದಿಂದ ಗುಂಡಿನ ದಾಳಿಯಿಂದ ನಡೆದ ನಷ್ಟಕ್ಕೆ ಸರಕಾರ 60%ದಷ್ಟು ಹೊಣೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಪರಾಧ ಹಿನ್ನಲೆಯುಳ್ಳ ಕೆಲ್ಲಿಗೆ ಬಂದೂಕು ಲೈಸೆನ್ಸ್ ಮಂಜೂರು ಮಾಡದಿದ್ದರೆ ಗುಂಡಿನ ದಾಳಿ ಪ್ರಕರಣವನ್ನು ತಡೆಯಬಹುದಿತ್ತು ಎಂದು ಸಂತ್ರಸ್ತರ ಕುಟುಂಬದವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ದಾಖಲಿಸುವುದಾಗಿ ವಾಯುಪಡೆಯ ವಕ್ತಾರೆ ಆ್ಯನ್ ಸ್ಟೆಫಾನೆಕ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News