ಸಂಸತ್ ಸಿಬ್ಬಂದಿಯ ಮೇಲೆ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಕ್ಷಮೆ ಯಾಚಿಸಿದ ಆಸ್ಟ್ರೇಲಿಯಾ ಪ್ರಧಾನಿ

Update: 2022-02-08 18:21 GMT

ಸಿಡ್ನಿ, ಫೆ.8: ಆಸ್ಟ್ರೇಲಿಯಾದಲ್ಲಿ ವ್ಯಾಪಕ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿದ್ದ ಸಂಸತ್ ಸಿಬಂದಿಯ ನಿಂದನೆ, ಬೆದರಿಕೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸಂತ್ರಸ್ತೆಯ ಕ್ಷಮೆ ಯಾಚಿಸಿದ್ದಾರೆ. 2019ರಲ್ಲಿ ಸಚಿವರ ಕಚೇರಿಯಲ್ಲಿ ತನ್ನ ಮೇಲೆ ಸಹೋದ್ಯೋಗಿಯೊಬ್ಬ ಅತ್ಯಾಚಾರ ಎಸಗಿದ್ದ ಎಂದು ಸಂಸತ್ನ ಮಾಜಿ ಉದ್ಯೋಗಿ ಬ್ರಿಟಾನಿ ಹಿಗ್ಗಿನ್ಸ್ ಹೇಳಿದ್ದರು. ಈ ಘಟನೆಯ ಬಗ್ಗೆ ಹಿಗ್ಗಿನ್ಸ್ ಅವರಿಂದ ನೇರ ಕ್ಷಮೆ ಯಾಚಿಸುವುದಾಗಿ ಮಾರಿಸನ್ ಹೇಳಿದ್ದಾರೆ.

 
ಸಂಸತ್ತಿನಲ್ಲಿ ನಡೆದ ಭಯಾನಕ ವಿಷಯದ ಬಗ್ಗೆ ಹಿಗ್ಗಿನ್ಸ್ ಅವರಿಂದ ಕ್ಷಮೆ ಯಾಚಿಸುತ್ತಿದ್ದೇನೆ. ಹಲವು ದಶಕಗಳಿಂದ ನಿಂದನೆ, ಬೆದರಿಸುವಿಕೆ, ಕಿರುಕುಳ ಮತ್ತು ಕೆಲವು ಸಂದರ್ಭಗಳಲ್ಲಿ ಹಿಂಸಾಚಾರವನ್ನು ಸಾಮಾನ್ಯೀಕರಿಸುವ ಪರಿಸರ ವ್ಯವಸ್ಥೆ, ಸಂಸ್ಕೃತಿ ಬೆಳೆದು ಬಂದಿದೆ. ಹಿಗ್ಗಿನ್ಸ್ಗೂ ಮೊದಲು ಇಂತಹ ಪರಿಸ್ಥಿತಿ ಎದುರಿಸಿದ್ದ ಪ್ರತಿಯೊಬ್ಬರಿಂದಲೂ ಕ್ಷಮೆ ಯಾಚಿಸುತ್ತಿದ್ದೇನೆ. ಇದು ಬದಲಾಗಬೇಕು, ಬದಲಾಗುತ್ತಿದೆ ಮತ್ತು ಬದಲಾಗಲಿದೆ ಎಂಬ ವಿಶ್ವಾಸವಿದೆ ಎಂದವರು ಹೇಳಿದ್ದಾರೆ. 

ತನಗಾದ ಅನ್ಯಾಯದ ಬಗ್ಗೆ ಕಳೆದ ಜನವರಿಯಲ್ಲಿ ಹಿಗ್ಗಿನ್ಸ್ ಬಹಿರಂಗ ಹೇಳಿಕೆ ನೀಡಿದ ಬಳಿಕ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿತ್ತು. 2019ರ ಚುನಾವಣೆ ಸಂದರ್ಭ ಪೊಲೀಸರಲ್ಲಿ ದೂರು ದಾಖಲಿಸದಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು. ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದಾಗ ಅವರು ನಡೆದುಕೊಂಡ ರೀತಿಯ ಬಗ್ಗೆಯೂ ಹಿಗ್ಗಿನ್ಸ್ ಬೇಸರ ವ್ಯಕ್ತಪಡಿಸಿದ್ದರು. ಬಳಿಕ ಸಂಸತ್ ಭವನದ ಇತರ ಕೆಲವು ಮಹಿಳಾ ಸಿಬಂದಿಗಳೂ ತಮಗೂ ಇದೇ ರೀತಿಯ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಹಲವು ಸಮಿತಿಗಳಿಂದ ತನಿಖೆಗೆ ಸರಕಾರ ಆದೇಶಿಸಿತ್ತು. ಇದರಲ್ಲಿ ಜೆಂಕಿನ್ಸ್ ಸಮಿತಿ ಸಲ್ಲಿಸಿದ 450 ಪುಟಗಳ ವರದಿಯಲ್ಲಿ ‘ ಸಂಸತ್ ಭವನದಲ್ಲಿ ಕಾರ್ಯನಿರ್ವಹಿಸುವ ಮೂವರಲ್ಲಿ ಒಬ್ಬರು ಕಾರ್ಯನಿರ್ವಹಣೆಯ ಸಂದರ್ಭ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ’ 

ಎಂದು ಉಲ್ಲೇಖಿಸಲಾಗಿದೆ. ಪ್ರಮುಖ ವಿಪಕ್ಷವಾದ ಲೇಬರ್ ಪಾರ್ಟಿಯ ಮುಖಂಡ ಆ್ಯಂಟೊನಿ ಅಲ್ಬಾನಿಸ್ ಅವರೂ ತಮ್ಮ ಪಕ್ಷದ ಪರವಾಗಿ ಹಿಗ್ಗಿನ್ಸ್ ಅವರ ಕ್ಷಮೆ ಯಾಚಿಸಿದ್ದಾರೆ. ಆದರೆ, ಮತ್ತೊಬ್ಬ ಅತ್ಯಾಚಾರ ಸಂತ್ರಸ್ತೆ ಗ್ರೇಸ್ ಟೇಮ್ ಪ್ರಧಾನಿಯ ಕ್ಷಮಾಯಾಚನೆಯನ್ನು ತಿರಸ್ಕರಿಸಿದ್ದಾರೆ. ‘ತಡೆಗಟ್ಟುವ ಪೂರ್ವಭಾವಿ ಕ್ರಮಗಳ ಬದಲು, ಅಂತಿಮ ಕ್ಷಣದ ಚುನಾವಣಾ ಸ್ಟಂಟ್ನ ಅಗತ್ಯವಿದೆಯೇ? ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News