×
Ad

ಚುನಾವಣೆ ವೇಳೆ ಕೋಮು, ಫ್ಯಾಸಿಸ್ಟ್ ಶಕ್ತಿಗಳ ಬಗ್ಗೆ ಗಮನ ಇರಲಿ: ಗೋವಾ ಚರ್ಚ್ ಸಂಘಟನೆ ಎಚ್ಚರಿಕೆ

Update: 2022-02-09 07:16 IST

ಪಣಜಿ: ದೇಶಾದ್ಯಂತ ಮತ್ತು ರಾಜ್ಯದಲ್ಲಿ ಇರುವ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಾಮಾಜಿಕ ನ್ಯಾಯ ಮತ್ತು ಶಾಂತಿ ಮಂಡಳಿ ಎಂಬ ಗೋವಾ ಚರ್ಚ್‌ಗಳ ಸಾಮಾಜಿಕ ವಿಸ್ತರಣೆ ಸಂಸ್ಥೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಬುದ್ಧಿವಂತರಾಗಿ ಮತದಾನ ಮಾಡಬೇಕು ಎಂದು ಸಲಹೆ ಮಾಡಿದೆ.

ಧರ್ಮವನ್ನು ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವುದು, ಪರಿಸರಕ್ಕೆ ಹಾನಿ ಹಾಗೂ ಭಿನ್ನಮತದ ರಾಜಕೀಯವನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡುವಂತೆ ಸೂಚಿಸಿದೆ.

"ಅಸಹಿಷ್ಣುತೆ, ಎದುರಾಳಿಗಳ ದಮನಕ್ಕೆ ಕಾನೂನು ಜಾರಿ ಏಜೆನ್ಸಿಗಳ ದುರ್ಬಳಕೆ, ಮುಖ್ಯವಾಹಿನಿ ಮಾಧ್ಯಮಗಳ ಸಮಗ್ರ ನಿಯಂತ್ರಣ, ಸತ್ಯದ ಮೇಲೆ ಏಕಸ್ವಾಮ್ಯದ ತೋರಿಕೆ, ಕರಾಳ ಕಾನೂನುಗಳು, ಒಕ್ಕೂಟ ವ್ಯವಸ್ಥೆಗೆ ಎದುರಾಗಿರುವ ಅಪಾಯ, ಶಾಸನಗಳ ಸರ್ವನಾಶ ಮತ್ತು ರೈತರು ನ್ಯಾಯಕ್ಕಾಗಿ ಹೋರಡುವ ಸನ್ನಿವೇಶಗಳನ್ನು ನಾವು ಕಾಣುತ್ತಿದ್ದೇವೆ. ಪ್ರತಿ ಸಮಸ್ಯೆಯನ್ನು ಧ್ರುವೀಕರಣದ ರೀತಿಯಲ್ಲಿ ಬಿಂಬಿಸಲಾಗುತ್ತಿದೆ" ಎಂದು ಚರ್ಚ್‌ಗಳ ಮೂಲಕ ಮತದಾರರಿಗೆ ವಿತರಿಸಿರುವ ಸಲಹಾಪತ್ರದಲ್ಲಿ ವಿವರಿಸಲಾಗಿದೆ. ಅದರೆ ಯಾವುದೇ ಪಕ್ಷಗಳನ್ನು ಈ ಪತ್ರದಲ್ಲಿ ಹೆಸರಿಸಿಲ್ಲ.

"ಸಮಾಜದ ದುರ್ಬಲ ವರ್ಗದವರ ಮೇಲೆ ಮತ್ತು ಅಲ್ಪಸಂಖ್ಯಾತರ ಮೇಲೆ ಬಲವಂತದ ಮತಾಂತರ ಆರೋಪದಲ್ಲಿ ದಾಳಿ ನಡೆಸಲಾಗುತ್ತಿದೆ. ಕ್ರಿಸ್‌ಮಸ್ ಸಡಗರ ಸೇರಿದಂತೆ ವಿವಿಧ ಪ್ರಾರ್ಥನಾ ಸೇವೆಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ಸಾಮೂಹಿಕ ಹತ್ಯೆಗೆ ಕರೆ ನೀಡಲಾಗುತ್ತಿದೆ ಎಂದು "ರಿಫ್ಲೆಕ್ಟ್ ಪ್ರೇ ಆ್ಯಂಡ್ ವೋಟ್" ಎಂಬ ಕರಪತ್ರದಲ್ಲಿ ಹೇಳಲಾಗಿದೆ.

ಕೋಮು ಮತ್ತು ಫ್ಯಾಸಿಸ್ಟ್ ಶಕ್ತಿಗಳ ಮುಖವನ್ನು ಮರೆಮಾಚಿಕೊಂಡ ಪರ್ಯಾಯ ರಾಜಕೀಯ ಪಕ್ಷಗಳ ಬಗ್ಗೆಯೂ ಎಚ್ಚರ ವಹಿಸಬೇಕಾಗಿದೆ ಎಂದು ಸಿಎಸ್‌ಜೆಪಿ ಹೇಳಿದೆ. ಪ್ರತಿ ಚುನಾವಣೆಗೆ ಮುನ್ನ ಸಿಎಸ್‌ಜೆಪಿ ಇಂಥ ಸಲಹೆಗಳನ್ನು ಮತದಾರರಿಗೆ ಅದರಲ್ಲೂ ಪ್ರಮುಖವಾಗಿ ಕ್ರೈಸ್ತ ಮತದಾರರಿಗೆ ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News