ಸತ್ಯ ಬಯಲಿಗೆಳೆಯುವ ಕಾರಣ ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿಗೆ ಭಯ : ರಾಹುಲ್‌ ಗಾಂಧಿ

Update: 2022-02-09 02:19 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಸತ್ಯವನ್ನು ಬಯಲಿಗೆಳೆಯುವ ಕಾರಣದಿಂದ ಕಾಂಗ್ರೆಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಯ ಇದೆ. ಈ ಕಾರಣದಿಂದ ಪ್ರಧಾನಿಯವರು ಸಂಸತ್ತಿನ ಎರಡೂ ಸದನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಪ್ರತಿದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಮತ್ತು ಜವಾಹರಲಾಲ್ ನೆಹರೂ ಅವರನ್ನು ನಿಂದಿಸುವುದೇ ಪ್ರಧಾನಿಗೆ ಇಷ್ಟವೆನಿಸಿದರೆ, "ನನ್ನ ಅತಿಥಿಯಾಗಿರಿ; ಆದರೆ ನಿಮ್ಮ ಕೆಲಸ ಮಾಡಿ" ಎಂದು ವ್ಯಂಗ್ಯವಾಡಿದ್ದಾರೆ. "ನನ್ನ ಅಜ್ಜನಿಗೆ ಯಾರ ಪ್ರಮಾಣಪತ್ರವೂ ಬೇಕಾಗಿಲ್ಲ. ಅವರ ಬಗ್ಗೆ ಯಾರು ಏನು ಹೇಳಿದರೂ ಲೆಕ್ಕಿಸುವುದಿಲ್ಲ" ಎಂದು ರಾಹುಲ್‌ ಹೇಳಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಮೋದಿ ಮಂಗಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ತುರ್ತು ಪರಿಸ್ಥಿತಿ, ಸಿಕ್ಖರ ಹತ್ಯಾಕಾಂಡ, ಜಾತಿ ರಾಜಕೀಯ ಅಥವಾ ಕಾಶ್ಮೀರ ಪಂಡಿತರ ಪಲಾಯನ ಯಾವುದೂ ಇರುತ್ತಿರಲಿಲ್ಲ ಎಂದು ಗೇಲಿ ಮಾಡಿದ್ದರು.

ಮೋದಿ ವಿರುದ್ಧ ಪ್ರತಿದಾಳಿ ನಡೆಸಿದ ರಾಹುಲ್, "ಪ್ರಧಾನಿಯವರು ಎರಡು ಭಾರತದ ಬಗ್ಗೆ, ಚೀನಾ ಮತ್ತು ಪಾಕಿಸ್ತಾನ ಒಂದಾಗುತ್ತಿರುವ ಬಗ್ಗೆ ಹಾಗೂ ಭಾರತದ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿಯ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಉತ್ತರಿಸುತ್ತಿಲ್ಲ" ಎಂದು ವ್ಯಂಗ್ಯವಾಡಿದರು. ಅವರಿಗೆ ಕಾಂಗ್ರೆಸ್ ಬಗ್ಗೆ ಭಯ ಇದೆ. ಕಾಂಗ್ರೆಸ್ ಪಕ್ಷ ಸತ್ಯವನ್ನು ಮಾತನಾಡುವುದರಿಂದ ಆತಂಕ ಇದೆ. ಅವರು ಮಾರಾಟ ಮಾಡುವ ವ್ಯವಹಾರದಲ್ಲಿದ್ದಾರೆ. ಅವರು ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಆದ್ದರಿಂದ ಭೀತಿ ಸಹಜ; ಇದು ಸಂಸತ್ತಿನಲ್ಲಿ ಪ್ರದರ್ಶನಗೊಂಡಿದೆ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News