ಪಶ್ಚಿಮ ಬಂಗಾಳ ನಗರಸಭೆ ಚುನಾವಣೆ; ಸುವೇಂದು ಅಧಿಕಾರಿ ಸಹೋದರನಿಗೆ ಬಿಜೆಪಿ ಟಿಕೆಟ್ ನಿರಾಕರಣೆ

Update: 2022-02-09 03:00 GMT
ಸುವೇಂದು ಅಧಿಕಾರಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರನ್ನು ಅನುಸರಿಸಿ ಬಿಜೆಪಿ ಸೇರಿದ್ದ ಸಹೋದರ ಸುಮೇಂದು ಅಧಿಕಾರಿಯವರಿಗೆ ಈ ತಿಂಗಳ 27ರಂದು ನಡೆಯುವ ನಗರಸಭೆ ಚುನಾವಣೆಗೂ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಪಕ್ಷದ ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಹಲವರ ಹುಬ್ಬೇರಿಸಿದೆ.

ಇದರಿಂದಾಗಿ ಪೂರ್ವ ಮಿಡ್ನಾಪುರ ಜಿಲ್ಲೆಯ ಕಾಂತಿ ನಗರಸಭೆ ಚುನಾವಣೆಯಲ್ಲಿ ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಿ ಕುಟುಂಬದಿಂದ ಯಾರೂ ಸ್ಪರ್ಧಿಸುತ್ತಿಲ್ಲ. 2021ರ ಜನವರಿಯಲ್ಲಿ ಬಿಜೆಪಿ ಸೇರುವ ಮುನ್ನ ಸುಮೇಂದು ಅಧಿಕಾರಿ ಈ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದರು. ಸ್ಥಳೀಯ ಸಂಸ್ಥೆಯ ಅವಧಿ ಒಂದು ವರ್ಷದ ಹಿಂದೆ ಮುಗಿದ ಕಾರಣದಿಂದ 2020ರ ವರೆಗೂ ಅವರು ಈ ನಗರಸಭೆಯ ಆಡಳಿತಾಧಿಕಾರಿಯಾಗಿದ್ದರು.

ಕಾಂತಿ ಸಂಘಟನಾ ಸಮಿತಿಯ ಕಾರ್ಯದರ್ಶಿಯಾಗಿರುವ ಸುಮೇಂದು, ಪಕ್ಷದಿಂದ ಟಿಕೆಟ್ ನೀಡದೇ ಇರುವ ಬಗೆಗಿನ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. "ಒಂದು ನಗರಸಭೆಯನ್ನು ಒಂದೇ ಕುಟುಂಬ ಸದಾ ನಿಭಾಯಿಸುವ ಹೊಣೆ ಹೊರುವುದು ಬಿಜೆಪಿ ಸಂಸ್ಕೃತಿಯಲ್ಲ. ನನ್ನ ಪಾಲಿಗೆ ಅದು ವಂಶ ಪಾರಂಪರ್ಯ ರಾಜಕಾರಣ. ಬಿಜೆಪಿ ಅದರಲ್ಲಿ ನಂಬಿಕೆ ಇಟ್ಟಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.

ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಬಿಜೆಪಿ ಇತರ ಪಕ್ಷಗಳಂತೆ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲ. ಚುನಾವಣೆ ದಿನ ಯಾವುದೇ ಭಯೋತ್ಪಾದನೆ ಅಥವಾ ದಾಳಿ ನಡೆಯದಿದ್ದರೆ ನಾವು ಕಾಂತಿ ಚುನಾವಣೆಯನ್ನು ಗೆಲ್ಲುತ್ತೇವೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸುಮೇಂಧು ಅವರ ತಂದೆ ಹಾಗೂ ಸಂಸದರಾದ ಶಿಶಿರ್ ಅಧಿಕಾರಿ, ಕಾಂತಿ ನಗರಸಭೆಯ ಅಧ್ಯಕ್ಷರಾಗಿ 1990ರಿಂದ 2005ರವರೆಗೆ ಕಾರ್ಯ ನಿರ್ವಹಿಸಿದ್ದರು. 2006ರಿಂದ 2010ರವರೆಗೆ ಸುವೇಂದು ಅಧಿಕಾರಿ ಈ ಸ್ಥಾನದಲ್ಲಿದ್ದರು.

ಆದರೆ ಈ ಬಾರಿ ಸೋಲುವ ಭಯದಿಂದ ಸುವೇಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಟಿಎಂಸಿ ಮುಖಂಡ ಫಿರಾದ್ ಹಕೀಂ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News