ಕೇರಳ: ಅನ್ನ,ಆಹಾರವಿಲ್ಲದೆ 2 ದಿನಗಳಿಂದ ಪರ್ವತದಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸಿದ ಭಾರತೀಯ ಸೇನೆ

Update: 2022-02-09 06:24 GMT
Photo: ndtv.com

ತಿರುವನಂತಪುರಂ: ಕೇರಳದ ಪಾಲಕ್ಕಾಡ್‌ನ ಪರ್ವತದಲ್ಲಿ ಸೋಮವಾರದಿಂದ ಬಂಡೆಗಳ ನಡುವೆ ಸಿಕ್ಕಿಬಿದ್ದಿದ್ದ ಯುವಕನನ್ನು ಸೇನೆಯ ಮ್ಯಾರಥಾನ್ ಪ್ರಯತ್ನದ ನಂತರ ಬುಧವಾರ  ಬೆಳಗ್ಗೆ ರಕ್ಷಿಸಲಾಗಿದೆ.

ರಕ್ಷಣಾ ಕಾರ್ಯದ  ನಂತರ, ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದ ಯುವಕ ಆರ್. ಬಾಬು ಹೆಲ್ಮೆಟ್ ಧರಿಸಿದ್ದ ಸೇನಾ ಸಿಬ್ಬಂದಿಯೊಂದಿಗೆ ಕಾಣಿಸಿಕೊಂಡರು.  ಕೆಲವರು ಸೆಲ್ಫಿ ಕ್ಲಿಕ್ಕಿಸಿ ವಿಜಯದ ಚಿಹ್ನೆಯನ್ನು ತೋರಿಸಿದರು.

ಆರ್. ಬಾಬು ಸೋಮವಾರ ಇಬ್ಬರು ಸ್ನೇಹಿತರೊಂದಿಗೆ ಮಲಂಪುಳದ ಚೇರಾದ್ ಬೆಟ್ಟವನ್ನು ಏರಿದ್ದಾರೆ. ಗೆಳೆಯರು ಪ್ರಯತ್ನ ಕೈಬಿಟ್ಟ ನಂತರವೂ ಬಾಬು  ಬೆಟ್ಟ ಹತ್ತುತ್ತಲೇ ಇದ್ದು, ಮೇಲಕ್ಕೆ ತಲುಪಿದರೂ ಕಾಲು ಜಾರಿ ಎರಡು ಬಂಡೆಗಳ ನಡುವೆ ಸಿಕ್ಕಿ ಬಿದ್ದಿದ್ದ  ಎಂದು ಸ್ಥಳೀಯರು ಹೇಳಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು, ಸೇನಾ ರಕ್ಷಣಾ ತಂಡವು ಯುವಕನೊಂದಿಗೆ ಮಾತನಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಪಾಲಕ್ಕಾಡ್‌ನಲ್ಲಿ  ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ  ನೀರು ಮತ್ತು ಆಹಾರವಿಲ್ಲದೆ ಬಿಸಿಲಿನ ತಾಪದಲ್ಲಿ ಬಂಡೆಗಳ ನಡುವೆ ಸಿಲುಕಿರುವ ಆರ್.  ಬಾಬುನನ್ನು ರಕ್ಷಿಸಲು ಮಂಗಳವಾರ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸೇರಿದಂತೆ ಹಲವು ರೀತಿಯಲ್ಲಿ  ಪ್ರಯತ್ನ ಮಾಡಲಾಗಿತ್ತು.

"ಮಲಂಪುಳ ಚೇರತ್ ಬೆಟ್ಟದಲ್ಲಿ ಸಿಲುಕಿರುವ ಯುವಕನನ್ನು ರಕ್ಷಿಸುವ ಪ್ರಯತ್ನಗಳು ಭರದಿಂದ ಸಾಗಿವೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಎರಡು ಘಟಕಗಳಿವೆ. ಸೇನಾ ಸದಸ್ಯರು ಯುವಕನೊಂದಿಗೆ ಮಾತನಾಡಲು ಸಾಧ್ಯವಾಯಿತು. ರಕ್ಷಣಾ ಕಾರ್ಯಾಚರಣೆಯನ್ನು ಇಂದು ತೀವ್ರಗೊಳಿಸಲಾಗುತ್ತದೆ. ಐಎಎಫ್ ಹಾಗೂ ಎಂಸಿಸಿ ಹೆಲಿಕಾಪ್ಟರ್ ನಿಯೋಜಿಸಲು ಸಿದ್ಧವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News