ಮಹಾರಾಷ್ಟ್ರ ಸರಕಾರ ಉರುಳಿಸಲು ಸಹಾಯ ಮಾಡದ್ದಕ್ಕೆ ಇಡಿ ತನಗೆ, ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ: ಸಂಜಯ್ ರಾವತ್ ಆರೋಪ

Update: 2022-02-09 05:48 GMT

ಹೊಸದಿಲ್ಲಿ: ಮಹಾರಾಷ್ಟ್ರ ಸರಕಾರವನ್ನು ಉರುಳಿಸಲು ಸಹಾಯ ಮಾಡಲು ನಿರಾಕರಿಸಿದ ನಂತರ ಜಾರಿ ನಿರ್ದೇಶನಾಲಯವು(ಇಡಿ) ತನಗೆ ಹಾಗೂ ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಮಂಗಳವಾರ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಇಡಿ ಮತ್ತು ಇತರ ತನಿಖಾ ಸಂಸ್ಥೆಯ ಅಧಿಕಾರಿಗಳು "ಈಗ ಅವರ ರಾಜಕೀಯ ಯಜಮಾನರ ಕೈಗೊಂಬೆಗಳಾಗಿದ್ದಾರೆ" ಹಾಗೂ  ಅಧಿಕಾರಿಗಳು "ನನ್ನನ್ನು 'ಫಿಕ್ಸ್' ಮಾಡಲು ತಮ್ಮ 'ಯಜಮಾನರು' ಹೇಳಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ" ಎಂದು ರಾವತ್ ಹೇಳಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲು ಸಹಾಯ ಮಾಡಲು ನಿರಾಕರಿಸಿದರೆ ಜೈಲು ಶಿಕ್ಷೆ ವಿಧಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ರಾವತ್ ಸೂಕ್ಷ್ಮ ಹೇಳಿಕೆಯೊಂದನ್ನು ನೀಡಿದರು.

"ಸುಮಾರು ಒಂದು ತಿಂಗಳ ಹಿಂದೆ, ಕೆಲವು ಜನರು ನನ್ನನ್ನು ಸಂಪರ್ಕಿಸಿದರು ಹಾಗೂ  ಮಹಾರಾಷ್ಟ್ರದಲ್ಲಿ ರಾಜ್ಯ ಸರಕಾರವನ್ನು ಉರುಳಿಸಲು ಅವರಿಗೆ ಸಹಾಯ ಮಾಡುವಂತೆ ಹೇಳಿದರು. ರಾಜ್ಯವು ಮಧ್ಯಂತರ ಚುನಾವಣೆಗೆ ಹೋಗುವ ಪ್ರಯತ್ನದಲ್ಲಿ ನಾನು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಬಯಸಿದ್ದರು. ನಾನು ಅದನ್ನು ನಿರಾಕರಿಸಿದೆ.  ನಿರಾಕರಿಸಿದ್ದಕ್ಕೆ  ನಾನು ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂದು ನನಗೆ ಎಚ್ಚರಿಕೆ ನೀಡಲಾಯಿತು.ನನ್ನ ಭವಿಷ್ಯವು ಹಲವು ವರ್ಷಗಳ ಕಾಲ ಜೈಲುವಾಸದಲ್ಲಿರುವ ಕೇಂದ್ರದ ಮಾಜಿ ರೈಲ್ವೇ ಸಚಿವರಂತೆಯೇ ಇರಬಹುದು ಎಂದು ನನಗೆ ತಿಳಿಸಲಾಯಿತು. ಮಹಾರಾಷ್ಟ್ರದ ಸಂಪುಟದಲ್ಲಿರುವ ಇಬ್ಬರು ಹಿರಿಯ ಸಚಿವರು ಹಾಗೂ ಮಹಾರಾಷ್ಟ್ರದ ಇಬ್ಬರು ಹಿರಿಯ ನಾಯಕರನ್ನು ಕೂಡ  ಪಿಎಂಎಲ್‌ಎ ಕಾಯ್ದೆಯಡಿ ಜೈಲಿಗೆ ತಳ್ಲಲಾಗುವುದು ಎಂದು ನನಗೆ ಎಚ್ಚರಿಕೆ ನೀಡಲಾಗಿತ್ತು.  ರಾಜ್ಯದ ಎಲ್ಲಾ ಪ್ರಮುಖ ನಾಯಕರು ಕಂಬಿ ಹಿಂದೆ ಹೋದ ಬಳಿಕ  ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತದೆ ಎಂದು ನನಗೆ ತಿಳಿಸಲಾಯಿತು'' ಎಂದು ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News