ಸೋನಿಯಾ ಗಾಂಧಿ ನಿವಾಸದ ಬಾಡಿಗೆ ಪಾವತಿಸಿಲ್ಲ: ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಬಹಿರಂಗ
ಹೊಸದಿಲ್ಲಿ, ಫೆ. 10: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ ಸೇರಿದಂತೆ ಕಾಂಗ್ರೆಸ್ ನಾಯಕರ ಹಲವು ಸೊತ್ತುಗಳ ಬಾಡಿಗೆ ಪಾವತಿಯಾಗಿಲ್ಲ.
ಹಲವು ಇಂತಹ ಸೊತ್ತುಗಳ ಬಾಡಿಗೆ ಪಾವತಿ ಬಾಕಿ ಇದೆ ಎಂಬುದು ಮಾಹಿತಿ ಹಕ್ಕು ಹೋರಾಟಗಾರ ಸುಜಿತ್ ಪಟೇಲ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಲಭ್ಯವಾದ ಪ್ರತಿಕ್ರಿಯೆಯಲ್ಲಿ ಬಹಿರಂಗಗೊಂಡಿದೆ.
ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯ ಬಾಡಿಗೆ 12,69,902 ರೂ. ಬಾಕಿ ಇದೆ. 2012 ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಬಾಡಿಗೆ ಪಾವತಿಸಲಾಗಿದೆ ಎಂದು ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ಸಚಿವಾಲಯ ಆರ್‌ಟಿಐಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದೆ.
ಅದೇ ರೀತಿ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದ ಬಾಡಿಗೆ 4,610 ರೂಪಾಯಿ ಬಾಕಿ ಇದೆ. 2020 ಸೆಪ್ಟಂಬರ್‌ನಲ್ಲಿ ಕೊನೆಯದಾಗಿ ಬಾಡಿಗೆ ಪಾವತಿಸಲಾಗಿತ್ತು.
ಹೊಸದಿಲ್ಲಿಯ ಚಾಣಕ್ಯಪುರಿಯಲ್ಲಿರುವ ಬಂಗ್ಲೆ ಸಂಖ್ಯೆ ಸಿ-11/109ರಲ್ಲಿ ಸೋನಿಯಾ ಗಾಂಧಿ ಅವರ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್ ಇದ್ದಾರೆ. ಅದರ 5,07,911 ಬಾಡಿಗೆ ಪಾವತಿ ಬಾಕಿ ಇದೆ. 2013 ಆಗಸ್ಟ್‌ನಲ್ಲಿ ಈ ಬಂಗ್ಲೆಯ ಕೊನೆಯ ಬಾಡಿಗೆ ಪಾವತಿಸಲಾಗಿತ್ತು.