ಡ್ರೋನ್‌ಗಳ ಆಮದು ನಿಷೇಧಿಸಿದ ಕೇಂದ್ರ ಸರಕಾರ
Update: 2022-02-10 21:23 IST
ಹೊಸದಿಲ್ಲಿ,ಫೆ.10: ರಕ್ಷಣೆ,ಭದ್ರತೆ ಮತ್ತು ಸಂಶೋಧನೆ ಉದ್ದೇಶಗಳನ್ನು ಹೊರತುಪಡಿಸಿ ಡ್ರೋನ್‌ಗಳ ಆಮದನ್ನು ನಿಷೇಧಿಸಿ ಸರಕಾರವು ಆದೇಶಿಸಿದೆ. ‘ಮೇಡ್ ಇನ್ ಇಂಡಿಯಾ’ ಡ್ರೋನ್‌ಗಳನ್ನು ಉತ್ತೇಜಿಸುವುದು ಈ ಕ್ರಮದ ಉದ್ದೇಶವಾಗಿದೆ ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ)ವು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಡ್ರೋನ್‌ಗಳ ಬಿಡಿಭಾಗಗಳ ಆಮದಿಗೆ ನಿಷೇಧವು ಅನ್ವಯಿಸುವುದಿಲ್ಲ.
120 ಕೋ.ರೂ.ಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹನ ಯೋಜನೆಯ ಪ್ರಕಟಣೆ ಮತ್ತು ಡ್ರೋನ್ ಕಾರ್ಯಾಚರಣೆ ನಿಯಮಗಳ ಉದಾರೀಕರಣ ಸೇರಿದಂತೆ ಡ್ರೋನ್‌ಗಳ ದೇಶಿಯ ತಯಾರಿಕೆಯನ್ನು ಉತ್ತೇಜಿಸಲು ಸರಕಾರವು ಸರಣಿ ಕ್ರಮಗಳನ್ನು ತೆಗೆದುಕೊಂಡಿದೆ.
ಸಂಶೋಧನೆ ಮತ್ತು ಅಭಿವೃದ್ಧಿ,ರಕ್ಷಣೆ ಮತ್ತು ಭದ್ರತಾ ಉದ್ದೇಶಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದ್ದರೂ,ಅವು ಡ್ರೋನ್‌ಗಳನ್ನು ಆಮದು ಮಾಡಿಕೊಳ್ಳಲು ಸರಕಾರದ ಅನುಮತಿ ಪಡೆಯಬೇಕಾಗುತ್ತದೆ ಎಂದು ಡಿಜಿಎಫ್‌ಟಿ ತಿಳಿಸಿದೆ.