×
Ad

ಮುಸ್ಲಿಂ ಮಹಿಳೆಯರ ಹಕ್ಕುಗಳ ದಾರಿಗೆ ಅಡ್ಡವಾಗಲು ಜನರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ:ಪ್ರಧಾನಿ ಮೋದಿ

Update: 2022-02-10 21:34 IST

ಸಹಾರನ್‌ಪುರ (ಉ.ಪ್ರ),ಫೆ.10:  ಆದಿತ್ಯನಾಥ್ ಸರಕಾರವು ಮುಸ್ಲಿಂ ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ನಿರಂತರವಾಗಿ ಶ್ರಮಿಸುತ್ತಿದೆ. ಈ ನಡುವೆ ಪ್ರತಿಪಕ್ಷಗಳು ಮತಗಳಿಗಾಗಿ ಮುಸ್ಲಿಂ ಮಹಿಳೆಯರ ಪ್ರಗತಿಯ ಹಾದಿಯಲ್ಲಿ ಅಡ್ಡವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು.

ಚುನಾವಣಾ ರ್ಯಾಲಿಯಲ್ಲಿ ಮಾತನಾಡುತಿದ್ದ ಅವರು,‘ತ್ರಿವಳಿ ತಲಾಖ್‌ನ್ನು ನಿಷೇಧಿಸುವ ಮೂಲಕ ಬಿಜೆಪಿಯು ಮುಸ್ಲಿಂ ಮಹಿಳೆಯರಿಗೆ ನ್ಯಾಯವನ್ನು ಖಚಿತಪಡಿಸಿದೆ. ಆದರೆ ಪ್ರತಿಪಕ್ಷಗಳು ನಮ್ಮ ಮುಸ್ಲಿಂ ಸೋದರಿಯರು ಮೋದಿಯನ್ನು ಹೊಗಳುವುದನ್ನು ನೋಡಿದಾಗ ಅವರನ್ನು ತಡೆಯಬೇಕು ಎಂದು ಅವುಗಳಿಗೆ ಅನ್ನಿಸಿದೆ. ಮುಸ್ಲಿಂ ಮಹಿಳೆಯರನ್ನು ತಡೆಯಲು ಪ್ರತಿಪಕ್ಷಗಳು ಅವರ ಹಕ್ಕುಗಳು ಮತ್ತು ಆಕಾಂಕ್ಷೆಗಳ ದಾರಿಗೆ ಅಡ್ಡವಾಗಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ ’ ಎಂದರು.

ಬಿಜೆಪಿ ಸರಕಾರವು ಪ್ರತಿಯೊಬ್ಬ ಮುಸ್ಲಿಂ ಮಹಿಳೆಯ ಜೊತೆಯಲ್ಲಿದೆ. ಪಕ್ಷದ ವಿರೋಧಿಗಳು ಅವರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದ ಮೋದಿ,ಮುಸ್ಲಿಂ ಹೆಣ್ಣುಮಕ್ಕಳ ಜೀವನವು ಯಾವಾಗಲೂ ಹಿಂದುಳಿಯುವಂತಾಗಲು ಈ ಜನರು ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದರು. ರಾಜಕೀಯ ಕೃಪಾಕಟಾಕ್ಷದಲ್ಲಿ ಜನರನ್ನು ಹೇಗೆ ಗುರಿಯಾಗಿಸಿಕೊಳ್ಳಲಾಗಿತ್ತು ಎನ್ನುವುದಕ್ಕೆ 2013ರ ಮುಝಫ್ಫರ್‌ನಗರ ದಂಗೆಗಳು ಮತ್ತು 2017ರ ಸಹಾರನ್‌ಪುರ ಹಿಂಸಾಚಾರಗಳು ಪುರಾವೆಗಳಾಗಿವೆ ಎಂದರು.

ಪ್ರತಿಪಕ್ಷಗಳನ್ನು ತರಾಟೆಗೆತ್ತಿಕೊಂಡ ಅವರು,ಉತ್ತರ ಪ್ರದೇಶವನ್ನು ಅಭಿವೃದ್ಧಿಗೊಳಿಸುವವರಿಗೆ ಮತ ನೀಡಲು ಜನರು ನಿರ್ಧರಿಸಿದ್ದಾರೆ. ಉ.ಪ್ರದೇಶವನ್ನು ದಂಗೆಮುಕ್ತವಾಗಿ ಇರಿಸುವವರಿಗೆ,ನಮ್ಮ ತಾಯಂದಿರು ಮತ್ತು ಸೋದರಿಯರನ್ನು ಭೀತಿಮುಕ್ತವಾಗಿ ಇರಿಸುವವರಿಗೆ ಮತ್ತು ಅಪರಾಧಿಗಳನ್ನು ಜೈಲಿನಲ್ಲಿ ಇರಿಸುವವರಿಗೆ ಜನರು ಮತಗಳನ್ನು ನೀಡಲಿದ್ದಾರೆ. ಸಂಪೂರ್ಣ ಪರಿವಾರ-ವಾದ ಪಕ್ಷವೊಂದು ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಅದು ವಿದ್ಯುತ್ ಪೂರೈಕೆಯ ಭರವಸೆಯನ್ನು ನೀಡಿತ್ತು,ಆದರೆ ಉ.ಪ್ರದೇಶವನ್ನು ಕತ್ತಲೆಯಲ್ಲಿಟ್ಟಿತ್ತು ಎಂದರು.

ಸಮಾಜವಾದಿ ಪಕ್ಷವು ವಂಶ ರಾಜಕಾರಣದ ಮೂಲಕ ನಕಲಿ ಸಮಾಜವಾದದಲ್ಲಿ ತೊಡಗಿದೆ ಎಂದೂ ಆರೋಪಿಸಿದ ಅವರು,ಲೋಹಿಯಾ,ಜಾರ್ಜ್ ಫೆರ್ನಾಂಡಿಸ್,ನಿತೀಶ್ ಕುಮಾರ್ ಅವರ ಕುಟುಂಬಗಳನ್ನು ರಾಜಕೀಯದಲ್ಲಿ ನೀವು ಕಂಡಿದ್ದೀರಾ? ಅವರೆಲ್ಲ ಸಮಾಜವಾದಿಗಳಾಗಿದ್ದರು. ವಂಶ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News