×
Ad

ಹೊರರಾಜ್ಯಗಳ ವಾಹನಗಳಿಗೆ ಸಕಾಲದಲ್ಲಿ ತೆರಿಗೆ ಕಟ್ಟಲು ಆರ್‌ಟಿಒ ಸೂಚನೆ

Update: 2022-02-10 21:56 IST

ಉಡುಪಿ, ಫೆ.10: ಕರ್ನಾಟಕ ರಾಜ್ಯದಲ್ಲಿ ಹೊರರಾಜ್ಯಗಳ ವಾಹನಗಳು ಮೂರು ತಿಂಗಳಿಗಿಂತ ಹೆಚ್ಚು ಕಾಲ ರಾಜ್ಯದಲ್ಲಿ ಓಡಾಟ ನಡೆಸುತಿದ್ದರೂ, ಕರ್ನಾಟಕ ರಾಜ್ಯದ ತೆರಿಗೆ ಪಾವತಿಸದೇ ಸಂಚರಿಸುತ್ತಿರುವುದು ಕಂಡು ಬಂದಿದೆ. ಹೊರರಾಜ್ಯಗಳ ಮೋಟಾರು ವಾಹನಗಳ ಮಾಲಕರು ಒಂದು ವಾರದೊಳಗೆ ಕರ್ನಾಟಕ ರಾಜ್ಯದ ತೆರಿಗೆ ಪಾವತಿಸಲು ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹೊರರಾಜ್ಯಗಳ ವಾಹನಗಳು ತೆರಿಗೆ ಪಾವತಿಸದೇ ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಲ್ಲಿ ತಪಾಸಣೆ ಸಮಯದಲ್ಲಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದವರು ಎಚ್ಚರಿಸಿದ್ದಾರೆ. ಆದ್ದರಿಂದ ಹೊರರಾಜ್ಯಗಳ ವಾಹನ ಮಾಲಕರು ಕರ್ನಾಟಕ ರಾಜ್ಯದ ತೆರಿಗೆ ಪಾವತಿಸುವ ಮೂಲಕ ಕಾನೂನು ರೀತ್ಯಾ ಕ್ರಮಕ್ಕೆ, ದಂಡ ಪಾವತಿಸುವುದರಿಂದ ಪಾರಾಗಬಹುದು ಎಂದವರು ಹೇಳಿದ್ದಾರೆ.

ಹೊರರಾಜ್ಯದ ವಾಹನಗಳಿಗೆ ಬಿಎಚ್ ಸೀರೀಸ್ ವಾಹನವನ್ನಾಗಿ ಪರಿವರ್ತಿಸುವ ಏಕರೂಪದ ತೆರಿಗೆಯನ್ನು ಪಾವತಿಸಬಹುದಾದ ಆನ್‌ಲೈನ್‌ನ ಸೇವಾಸಿಂಧುವಿನಲ್ಲಿ ಕೂಡಲೇ ಸಂಪರ್ಕಿಸಿ ತಮ್ಮ ವಾಹನದ ಸಂಖ್ಯೆಯನ್ನು ಬಿಎಚ್ ಸೀರಿಸ್ ಆಗಿ ಬದಲಾಯಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರಕಾರಿ, ಅರೆಸರಕಾರಿ ಹಾಗೂ ರಾಜ್ಯ ಸ್ವಾಮ್ಯತೆ ಇರುವ ಸಂಸ್ಥೆಗಳ ವಾಹನಗಳ ಮಾಲಕರ ವಿಳಾಸ ಪುರಾವೆ, ಉದ್ಯೋಗ ಖಾತರಿ ಪತ್ರದ ಪ್ರತಿ ಹಾಗೂ ಸಂಬಂಧಪಟ್ಟ ಇಲಾಖೆಯ ಸೇವಾ ಗುರುತಿನ ಚೀಟಿ ಹಾಗೂ ತಮ್ಮ ಮೇಲಾಧಿಕಾರಿಗಳ ಪ್ರಮಾಣ ಪತ್ರ, ರಹದಾರಿ ಪ್ರಮಾಣ ಪತ್ರ ಹಾಜರು ಪಡಿಸಬೇಕಾಗಿದೆ.

ಹೊರರಾಜ್ಯದ ವಾಹನಗಳ ಮಾಲಕರು ಈ ರಾಜ್ಯಕ್ಕೆ ವಲಸೆ ಬಂದ ಕೂಡಲೇ ತಮ್ಮ ಸ್ವಇಚ್ಛೆಯಿಂದ ಕೂಡ ಕರ್ನಾಟಕ ರಾಜ್ಯದ ತೆರಿಗೆಯನ್ನು ಪಾವತಿಸಬಹು ದಾಗಿದೆ. ಇದರಿಂದ ವಾಹನ ಮುಟ್ಟುಗೋಲು ಹಾಕಿಕೊಳ್ಳುವ ಹಾಗೂ ದಂಡ ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಆರ್‌ಟಿಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News