ಏನನ್ನು ತಿನ್ನಬೇಕು, ಧರಿಸಬೇಕು ಎಂಬುದನ್ನು ಬಿಜೆಪಿ ನಿರ್ಧರಿಸಲು ಬಯಸುತ್ತಿದೆ: ಸುಪ್ರಿಯಾ ಸುಳೆ
ಹೊಸದಿಲ್ಲಿ, ಫೆ. 10: ಲೋಕಸಭೆಯಲ್ಲಿ ಹಿಜಾಬ್ ವಿರೋಧದ ಬಗ್ಗೆ ಧ್ವನಿ ಎತ್ತಿರುವ ಎನ್‌ಸಿಪಿ ಸದಸ್ಯೆ ಸುಪ್ರಿಯಾ ಸುಳೆ, ಪ್ರತಿಯೊಬ್ಬರು ಏನನ್ನು ಧರಿಸಬೇಕು ಹಾಗೂ ಏನನ್ನು ತಿನ್ನಬೇಕು ಎಂಬುದನ್ನು ಕರ್ನಾಟಕದ ಆಡಳಿತಾರೂಢ ಬಿಜೆಪಿ ನಿರ್ಧರಿಸಲು ಬಯಸುತ್ತಿದೆ ಎಂದಿದ್ದಾರೆ.
ಒಂದು ವೇಳೆ ಯಾರಾದರೂ ಇದನ್ನು ವಿರೋಧಿಸಿದರೆ, ಅವರನ್ನು ದೇಶ ದ್ರೋಹಿ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಬಜೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು ವಿಷಯಾಂತರ ಮಾಡಲು ಅಧ್ಯಕ್ಷರ ಅನುಮತಿ ಪಡೆದು ಮಾತನಾಡಲು ಆರಂಭಿಸಿದರು. ಮರಾಠಿಯಲ್ಲಿ ಮಾತನಾಡಿದ ಅವರು, ‘‘ಒಬ್ಬರು ಏನು ಧರಿಸಬೇಕು, ಅವರು ನಿರ್ಧರಿಸುತ್ತಾರೆ. ಏನು ತಿನ್ನಬೇಕು, ಅವರು ನಿರ್ಧರಿಸುತ್ತಾರೆ. ಒಬ್ಬರು ಯಾವ ಸಮಯದಲ್ಲಿ, ಎಲ್ಲಿಗೆ ಹೋಗಬೇಕು, ಅವರು ನಿರ್ಧರಿಸುತ್ತಾರೆ. ಏನನ್ನು ಮಾತನಾಡಬೇಕು, ಏನನ್ನು ಮಾತನಾಡಬಾರದು, ಅವರು ನಿಧರಿಸುತ್ತಾರೆ. ಏನನ್ನು ಹಂಚಿಕೊಳ್ಳಬೇಕು ಹಾಗೂ ಪಾರ್ವರ್ಡ್ ಮಾಡಬೇಕು, ಅವರು ನಿರ್ಧರಿಸುತ್ತಾರೆ. ಒಂದು ವೇಳೆ ನೀವು ಅವರನ್ನು ಟೀಕಿಸಿದರೆ, ನಿಮ್ಮನ್ನು ಅವರು ದೇಶದ್ರೋಹಿ ಎಂದು ಆರೋಪಿಸುತ್ತಾರೆ. ಒಂದು ವೇಳೆ ನೀವು ಪ್ರತಿಭಟನೆ ನಡೆಸಿದರೆ, ಅವರು ನಿಮ್ಮನ್ನು ಆಂದೋಲನಜೀವಿ ಎಂದು ಹೇಳುತ್ತಾರೆ’’ ಎಂದು ಅವರು ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉಪಸ್ಥಿತಿಯಲ್ಲೇ ಸುಳೆ ಅವರು ಈ ಮಾತುಗಳನ್ನು ಆಡಿದ್ದಾರೆ.