×
Ad

​ವಸತಿ ಸಮುಚ್ಚಯದ ಮೇಲ್ಛಾವಣಿ ಕುಸಿದು ಇಬ್ಬರು ಮೃತ್ಯು

Update: 2022-02-11 07:19 IST

ಗುರುಗಾಂವ್: ಬಹುಮಹಡಿ ವಸತಿ ಸಮುಚ್ಛಯದ ಆರನೇ ಮಹಡಿ ಛಾವಣಿ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಇಬ್ಬರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡ ಘಟನೆ ಸೆಕ್ಟರ್ 109ರಲ್ಲಿ ನಡೆದಿದೆ.

ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಛಾವಣಿಯ ಅಡಿಯಲ್ಲಿ ಸಿಲುಕಿಕೊಂಡ ಕೊಠಡಿಗಳು ಗುಹೆಯಂತೆ ಕಂಡುಬರುತ್ತಿದ್ದವು ಎಂದು ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.

ಚಿಂಚೆಲ್ಸ್ ಪರಡೈಸೊ ವಸತಿ ಸಮುಚ್ಛಯದ 18 ಮಹಡಿಯ ಡಿ ಟವರ್‌ನಲ್ಲಿ ಈ ದುರಂತ ಸಂಭವಿಸಿದೆ. ಏಳನೇ ಮಹಡಿಯ ಮಾಲಕ ನವೀಕರಣ ಕಾಮಗಾರಿ ನಡೆಸುತ್ತಿದ್ದಾಗ ಆರನೇ ಮಹಡಿಯ ಛಾವಣಿ ಕುಸಿಯಿತು ಎನ್ನಲಾಗಿದೆ. ಈ ಕಟ್ಟಡದ ಎರಡನೇ ಮತ್ತು ಏಳನೇ ಮಹಡಿಯಲ್ಲಿ ಮಾತ್ರ ಜನ ವಾಸವಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಮಹಿಳೆಯೊಬ್ಬರೂ ಸೇರಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಯ ತಂಡಗಳು, ಗುರುಗಾಂವ್ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಅವಶೇಷಗಳನ್ನು ತೆರವುಗೊಳಿಸಿ, ಸಿಕ್ಕಿಹಾಕಿಕೊಂಡಿರುವವರ ರಕ್ಷಣೆಯಲ್ಲಿ ತೊಡಗಿದ್ದಾರೆ. ಮೊದಲ ಮಹಡಿಯಲ್ಲಿ ಕೇಂದ್ರ ಉಗ್ರಾಣ ನಿಗಮ ಅಧಿಕಾರಿಯೊಬ್ಬರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ರಕ್ಷಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ದುರಂತದ ಪರಿಹಾರ ಕಾರ್ಯಗಳ ಮೇಲೆ ಸ್ವತಃ ನಿಗಾ ಇರಿಸಿರುವುದಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News