×
Ad

ನೆಹರೂ ಬಯಸಿದ್ದರೆ 1947ರಲ್ಲೇ ಗೋವಾ ವಿಮೋಚನೆ ಸಾಧ್ಯವಿತ್ತು : ಪ್ರಧಾನಿ ಮೋದಿ

Update: 2022-02-11 08:01 IST

ಪಣಜಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, "ಪಂಡಿತ್ ಜವಾಹರಲಾಲ್ ನೆಹರೂ ಬಯಸಿದ್ದರೆ 1947ರಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ ಗೋವಾ ವಿಮೋಚನೆ ಸಾಧ್ಯವಿತ್ತು. ಆದರೆ ಪೋರ್ಚುಗೀಸರ ಆಡಳಿತದಿಂದ ಸ್ವತಂತ್ರ್ಯಗೊಳ್ಳಲು ಹದಿನೈದು ವರ್ಷ ಬೇಕಾಯಿತು" ಎಂದು ಹೇಳಿದ್ದಾರೆ.

ಈ ತಿಂಗಳ 14ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಣಜಿ ಸಮೀಪದ ಮಪುಸಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಗೋವಾವನ್ನು ಇಂದಿಗೂ ತನ್ನ ವೈರಿ ಎಂದು ಪರಿಗಣಿಸುತ್ತಾ ಬಂದಿದೆ. ಪಕ್ಷ ರಾಜ್ಯದಲ್ಲಿ ನಿರಂತರವಾಗಿ ರಾಜಕೀಯ ಅಸ್ಥಿರತೆಯನ್ನು ಹೇರಿರುವುದೇ ಇದಕ್ಕೆ ಸಾಕ್ಷಿ" ಎಂದು ಬಣ್ಣಿಸಿದರು.

"ಕಾಂಗ್ರೆಸ್ ಪಕ್ಷ ಎಂದಿಗೂ ಗೋವಾದ ಯುವಜನರ ಆಕಾಂಕ್ಷೆಗಳನ್ನಾಗಲೀ, ರಾಜಕೀಯ ಸಂಸ್ಕೃತಿಯನ್ನಾಗಲೀ ಅರ್ಥ ಮಾಡಿಕೊಂಡಿಲ್ಲ. ಅದು ಸದಾ ಗೋವಾದ ಬಗ್ಗೆ ವೈರತ್ವದ ಭಾವನೆಯನ್ನೇ ಹೊಂದಿತ್ತು" ಎಂದು ಸತತ ಎರಡನೇ ಬಾರಿ ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿರುವ ಬಿಜೆಪಿ ಪರವಾಗಿ ಪ್ರಚಾರ ಭಾಷಣ ಮಾಡಿದರು.

ಹಲವು ಐತಿಹಾಸಿಕ ಸತ್ಯಾಂಶಗಳನ್ನು ಜನರಿಂದ ಹುದುಗಿಸಲಾಗಿದೆ ಎಂದು ಅವರು ಆಪಾದಿಸಿದರು. ಗೋವಾ ವಿಮೋಚನಾ ಚಳವಳಿಯನ್ನು ಕಾಂಗ್ರೆಸ್ ಪಕ್ಷ ಹೇಗೆ ನಾಶ ಮಾಡಿತು ಎನ್ನುವುದನ್ನು 23 ದಿನ ಹಿಂದೆ ನಾನು ಸಂಸತ್ತಿನಲ್ಲಿ ಮಾತನಾಡುವ ವೇಳೆ ದೇಶಕ್ಕೆ ಸತ್ಯ ಬಹಿರಂಗಪಡಿಸಿದ್ದೆ ಎಂದು ಮೋದಿ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News