×
Ad

ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ: ಮಮತಾ ಚುನಾವಣಾ ಏಜೆಂಟ್‌ಗೆ ಸುಪ್ರೀಂನಿಂದ ನಿರೀಕ್ಷಣಾ ಜಾಮೀನು

Update: 2022-02-11 09:02 IST

ಹೊಸದಿಲ್ಲಿ, ಫೆ. 10: ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ಏಜೆಂಟ್ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕ ಎಸ್.ಕೆ. ಸುಪಿಯಾನ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ವಿಲಕ್ಷಣ ಸಂಗತಿಗಳನ್ನು ಗಮನಿಸಿ, ಮೇಲ್ಮನವಿದಾರರು ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರು ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಅಭಯ್ ಎಸ್. ಓಕಾ ಅವರನ್ನು ಒಳಗೊಂಡ ಪೀಠ ಹೇಳಿದೆ. ಆದರೆ, ಸುಪಿಯಾನ್ ಅವರು ತನಿಖೆಯಲ್ಲಿ ಸಿಬಿಐಗೆ ಸಂಪೂರ್ಣವಾಗಿ ಸಹಕರಿಸಬೇಕಾಗುತ್ತದೆ. ಅಲ್ಲದೆ, ತನಿಖಾಧಿಕಾರಿ ಕರೆದಾಗ ಹಾಗೂ ತನಿಖೆಗೆ ಹಾಜರಾಗಬೇಕಾಗುತ್ತದೆ ಎಂದು ನಾವು ಹೇಳುತ್ತೇವೆ. ಮೇಲ್ಮನವಿದಾರರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕಂಡು ಬಂದರೆ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲಾಗುವುದು ಎಂದು ನಾವು ಪೂರ್ವಭಾವಿಯಾಗಿ ಸ್ಪಷ್ಟಪಡಿಸುತ್ತೇವೆ ಎಂದು ಪೀಠ ಹೇಳಿದೆ. ವಿಧಾನ ಸಭೆ ಚುನಾವಣೆಯ ಬಳಿಕ ಪಶ್ಚಿಮಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರದ ಸಂದರ್ಭ ಕಳೆದ ವರ್ಷ ಮೇಯಲ್ಲಿ ನಡೆದ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ದೇಬಬ್ರತ ಮೈಟಿ ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2021 ಮೇ 3ರಂದು ನಡೆದ ಗುಂಪು ಹಿಂಸಾಚಾರದಲ್ಲಿ ಮೈಟಿ ಗಾಯಗೊಂಡಿದ್ದರು. ಮೇ 13ರಂದು ಅವರು ಸಾವನ್ನಪ್ಪಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News