ಹೊಸದಿಲ್ಲಿ: ಹಿಜಾಬ್‌ ಬೆಂಬಲಿಸಿ‌ ಪ್ರತಿಭಟನೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳನ್ನು ತಡೆದ ಪೊಲೀಸರು

Update: 2022-02-11 14:31 GMT
Photo: Twitter/@SfiDelhi

ಹೊಸದಿಲ್ಲಿ: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ವಿರುದ್ಧ ಎರಡನೇ ದಿನವೂ ಪ್ರತಿಭಟನೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಕೂಡಾ ದೆಹಲಿಯ ಚಾಣಕ್ಯಪುರಿಯಲ್ಲಿರುವ ಕರ್ನಾಟಕ ಭವನದ ಎದುರು ಪ್ರತಿಭಟನೆಗೆ ಸಜ್ಜಾದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು.

ಹಿಜಾಬ್- ಕೇಸರಿ ಶಾಲು ಕುರಿತ ವಿವಾದದಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಎಸ್ಎಫ್ಐ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆಗೆ ಯೋಜನೆ ಹಾಕಿಕೊಂಡಿತ್ತು.

ಹಿಜಾಬ್ ಗೆ ವಿರೋಧ ವ್ಯಕ್ತಪಡಿಸುವ ಮೂಲಕ ಇಸ್ಲಾಮೋಫೋಬಿಯಾ ಹರಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಗುರುವಾರ ಕೂಡಾ, ಪ್ರತಿಭಟನಾಕಾರರು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಭವನದ ಹೊರಗೆ ಸೇರಿ ಪ್ರತಿಭಟಿಸಲಿದ್ದರು. ಪ್ರತಿಭಟನಾ ಸ್ಥಳಕ್ಕೆ ಅವರು ತಲುಪುವ ಮೊದಲೇ ಅವರಲ್ಲಿ ಹೆಚ್ಚಿನವರನ್ನು ವಶಕ್ಕೆ ಪಡೆಯಲಾಯಿತು. ಪೊಲೀಸರು ಅವರನ್ನು ಅಸ್ಸಾಂ ಭವನ ಮತ್ತು ಒಡಿಶಾ ಭವನದ ಬಳಿಯ ಪ್ರದೇಶಗಳಿಂದ ಹಿಡಿದು ಪೊಲೀಸ್ ಬಸ್‌ಗಳಲ್ಲಿ ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.

ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (AISA), ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ (SFI) ಮತ್ತು ಕ್ರಾಂತಿಕಾರಿ ಯುವ ಸಂಘಟನೆ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಲು ಯೋಜನೆ ಹಾಕಿಕೊಂಡಿತ್ತು.

ತಮ್ಮ ಮೇಲೆ ಪೋಲೀಸ್ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪೊಲೀಸರು ಆರೋಪಗಳನ್ನು ನಿರಾಕರಿಸಿದ್ದು, ವಿದ್ಯಾರ್ಥಿಗಳ ವಿರುದ್ಧ "ಯಾವುದೇ ಬಲ ಪ್ರಯೋಗವನ್ನು" ಮಾಡಿಲ್ಲ ಎಂದು ಹೇಳಿದ್ದಾರೆ.

ಎಸ್‌ಎಫ್‌ಐನ ವಿದ್ಯಾರ್ಥಿ ಪ್ರತಿಭಟನಾಕಾರರೊಬ್ಬರು, "ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ನಡೆಯುತ್ತಿರುವ ಶಿಕ್ಷಣ ವ್ಯವಸ್ಥೆಯ ಕೇಸರಿಕರಣದ ವಿರುದ್ಧ ಧ್ವನಿ ಎತ್ತಲು ನಾವು ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News