"ಸಂತ್ರಸ್ತೆ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಲಿಲ್ಲ": ಅತ್ಯಾಚಾರ ಆರೋಪಿ ನೌಕಾಪಡೆ ಅಧಿಕಾರಿ ಖುಲಾಸೆ
ಹೊಸದಿಲ್ಲಿ,ಫೆ.11: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಭಾರತೀಯ ನೌಕಾಪಡೆಯ ಅಧಿಕಾರಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ದೋಷಮುಕ್ತಗೊಳಿಸಿದೆ. ಲೈಂಗಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರಳು, ಮೂರು ವಿಭಿನ್ನ ರೂಪಾಂತರಿತ ಹೇಳಿಕೆಗಳನ್ನು ನೀಡಿರುವುದಾಗಿ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
‘‘ ನಡೆದಿದೆಯೆನ್ನಲಾದ ಘಟನೆಯಲ್ಲಿ ಯುವತಿಯು ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡಿರಲಿಲ್ಲ ಹಾಗೂ ಆಕೆ ತನ್ನನ್ನು ಮದುವೆಯಾಗುವಂತೆ ನೌಕಾಪಡೆಯ ಅಧಿಕಾರಿಯ ಮೇಲೆ ಒತ್ತಡ ಹೇರುವ ಉದ್ದೇಶದಿಂದಲೇ ದೂರನ್ನು ದಾಖಲಿಸಿರುವ ಹಾಗೆ ಕಾಣುತ್ತದೆ" ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಈ ಅಧಿಕಾರಿಯು, ತನ್ನನ್ನು ಮದುವೆಯಾಗುವ ಭರವಸೆ ನೀಡಿ, ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದನು ಹಾಗೂ 2015ರಲ್ಲಿ ಆತ ತನ್ನ ಮೇಲೆ ಲೈಂಗಿಕ ಹಲ್ಲೆ ಎಸಗಿದ್ದನೆಂದು ದೂರುದಾರಳು ಆರೋಪಿಸಿದ್ದಳು.
ಮದುವೆ ನಡೆಯದೇ ಇದ್ದಾಗ, ಮಹಿಳೆಯು ನೌಕಾಪಡೆ ಅಧಿಕಾರಿ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಳು. ತನ್ನ ಬಂಧುವೊಬ್ಬರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ತನ್ನ ಮೇಲೆ ನೌಕಾಪಡೆ ಅಧಿಕಾರಿ ಲೈಂಗಿಕ ಹಲ್ಲೆ ನಡೆಸಿದ್ದನೆಂದು ಆಕೆ ಆರೋಪಿಸಿದ್ದಳು.
ಆದರೆ ಲೈಂಗಿಕ ಹಲ್ಲೆ ನಡೆದ ಸಂದರ್ಭದಲ್ಲಿ ಮಹಿಳೆಯು ಸಣ್ಣದಾಗಿ ಚೀರಿದ್ದರೂ, ಘಟನೆಯು ಸಮೀಪದ ಕೊಠಡಿಯಲ್ಲಿದ ಆಕೆಯ ಕುಟುಂಬ ಸದಸ್ಯರ ಗಮನಕ್ಕೆ ಬಂದಿರುತ್ತಿತ್ತು ಎಂದು ನ್ಯಾಯಾಧೀಶರ ತನ್ನ ತೀರ್ಪಿನಲ್ಲಿ ಅಭಿಪ್ರಾಯಿಸಿದರು.
ತನ್ನ ಮೇಲೆ ‘ಅತ್ಯಾಚಾರ’ ನಡೆದಿರುವ ಬಗ್ಗೆ ಮಹಿಳೆಯು ತನ್ನ ತಾಯಿಗೆ ಹೇಳದೆ ಇರುವುದು ಮತ್ತು ಅಧಿಕಾರಿಯ ತಾಯಿಯು ವಿವಾಹವನ್ನು ರದ್ದುಪಡಿಸಿದ ಎರಡು ದಿನಗಳ ಆನಂತರ ಲೈಂಗಿಕ ಹಲ್ಲೆಯ ಘಟನೆಯನ್ನು ಬಹಿರಂಗಪಡಿಸಿರುವುದು ತೀರಾ ಅಸಹಜವಾಗಿ ಕಾಣುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ಆರೋಪಿಯು ಸಂದೇಹದ ಲಾಭದ ಆಧಾರದಲ್ಲಿ ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
ಘಟನೆಯು ನಡೆದಿದ್ದೇ ಆದಲ್ಲಿ, ಅದು ಸಂತ್ರಸ್ತೆಯ ಸಮ್ಮತಿಯಿಲ್ಲದೆ ಸಾಧ್ಯವಾಗುತ್ತಿರಲಿಲ್ಲವೆಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಜಾಮೀನು ಅರ್ಜಿ ಸಲಿಕೆಯ ಸಮಯದಲ್ಲಿ ಅಧಿಕಾರಿಯು ಒತ್ತಡಕ್ಕೆ ಒಳಗಾಗಿ ದೂರುದಾರಳನ್ನು ವಿವಾಹವಾಗಿದ್ದರು. ಆದರೆ ಆನಂತರ ಅವರು ವಿಚ್ಚೇದನಗೊಂಡಿದ್ದನ್ನು ಕೂಡಾ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಗಮನಕ್ಕೆ ತೆಗೆದುಕೊಂಡಿದೆ.