ಕೋವಿಡ್ ಸಂಕಷ್ಟ: ಕೇರಳದಲ್ಲಿ ಟೂರಿಸ್ಟ್ ಬಸ್‍ಗಳು ಕೆ.ಜಿಗೆ 45ರೂ.ನಂತೆ ಮಾರಾಟಕ್ಕೆ !

Update: 2022-02-12 12:05 GMT
Photo: New Indian express

ಕೊಚ್ಚಿ: ಕೇರಳದಲ್ಲಿ ಕೋವಿಡ್ ಸಾಂಕ್ರಾಮಿಕ ತಂದೊಡ್ಡಿದ ಸಮಸ್ಯೆಯಿಂದಾಗಿ ಟೂರಿಸ್ಟ್ ಬಸ್ ಮಾಲೀಕರುಗಳು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಹಾಗೂ ಹಲವರ ಸ್ಥಿತಿ ದಯನೀಯವಾಗಿದೆ ಎಂಬುದಕ್ಕೆ ಕೊಚ್ಚಿ ಮೂಲದ ಟೂರಿಸ್ಟ್ ಬಸ್ ಆಪರೇಟರ್ ಒಬ್ಬರು ಪೋಸ್ಟ್ ಮಾಡಿದ ಸಂದೇಶವೇ ಸಾಕ್ಷಿ- "ಟೂರಿಸ್ಟ್ ಬಸ್‍ಗಳು ಮಾರಾಟಕ್ಕಿವೆ- ಕೆಜಿಗೆ ರೂ 45" ಎಂಬ ಈ ಸಂದೇಶವನ್ನು ಕಾಂಟ್ರಾಕ್ಟ್ ಕ್ಯಾರೇಜ್ ಆಪರೇಟರ್ಸ್ ಅಸೋಸಿಯೇಷನ್ ಕೇರಳ ಶುಕ್ರವಾರ ತನ್ನ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಿದೆ.

ರಾಯ್ ಟೂರಿಸಂ ಮಾಲಕ ರಾಯ್ಸನ್ ಜೋಸೆಫ್ ಮೇಲೆ ತಿಳಿಸಿದ ಪೋಸ್ಟ್ ಹಾಕಿದವರು. ಕಳೆದ 12ರಿಂದ 18 ತಿಂಗಳು ಅವಧಿಯಲ್ಲಿ ಅವರು ತಮ್ಮ ಬಳಿಯಿದ್ದ 20 ಟೂರಿಸ್ಟ್ ಬಸ್‍ಗಳ ಪೈಕಿ 10 ಬಸ್‍ಗಳನ್ನು ಮಾರಾಟ ಮಾಡಿದ್ದಾರೆ.

ಸಾಲ ಮರುಪಾವತಿಸಬೇಕೆಂಬ ಉದ್ದೇಶದಿಂದ ರಾಯ್ಸನ್ ತಮ್ಮ 10 ಬಸ್ಸುಗಳನ್ನು ಇತ್ತೀಚೆಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. "ತಲಾ ಕೆಜಿಗೆ ರೂ 45ರಂತೆ ಪಾವತಿಸಲು ಸಿದ್ಧರಿರುವ ಯಾರಿಗಾದರೂ ನನ್ನ ಬಸ್‍ಗಳನ್ನು ಮಾರಾಟ ಮಾಡಲು ನಾನು ಸಿದ್ಧ. ಪರಿಸ್ಥಿತಿ ಬಹಳಷ್ಟು ಕೆಟ್ಟದಾಗಿದೆ. ಹಲವಾರು ಟೂರಿಸ್ಟ್ ಬಸ್ ಆಪರೇಟರ್‍ಗಳು ಆತ್ಮಹತ್ಯೆಯ ಅಂಚಿಗೆ ಬಂದಿದ್ದಾರೆ" ಎಂದು ಅವರು ಹೇಳುತ್ತಾರೆ. ಸಂಸ್ಥೆಯ ಆದಾಯ ಕಡಿಮೆಯಾಗುತ್ತಿದ್ದಂತೆಯೇ ಸುಮಾರು 50ರಷ್ಟು ಉದ್ಯೋಗಿಗಳು ತಮ್ಮ ನೌಕರಿ ತೊರೆದಿದ್ದಾರೆ.

"ಕಾಂಟ್ರಾಕ್ಟ್ ಕ್ಯಾರೇಜ್ ಆಪರೇಟರ್ಸ್ ಅಸೋಸಿಯೇಷನ್ ಕೇರಳ ಇದರ ಅಧ್ಯಕ್ಷ ಬಿನು ಜಾನ್ ಪ್ರಕಾರ ರಾಜ್ಯದಲ್ಲಿನ ಟೂರಿಸ್ಟ್ ಬಸ್‍ಗಳ ಸಂಖ್ಯೆ 14000ದಿಂದ ಈಗ 12,000ಕ್ಕೂ ಕಡಿಮೆಯಾಗಿದೆ. ಹಲವಾರು ಬಸ್‍ಗಳ ಮೇಲಿನ ಸಾಲ ಪಾವತಿಸಲಾಗದೆ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಎರಡು ತಿಂಗಳು ಅವಧಿಯಲ್ಲಿ 1,000ಕ್ಕೂ ಅಧಿಕ ಬಸ್‍ಗಳನ್ನು ಬ್ಯಾಂಕ್‍ಗಳು ಅಥವಾ ಖಾಸಗಿ ಫೈನಾನ್ಸ್ ಸಂಸ್ಥೆಗಳು ವಶಪಡಿಸಿಕೊಂಡಿವೆ" ಎಂದು ಅವರು ಹೇಳುತ್ತಾರೆ.

ಕೋವಿಡ್ ಮೊದಲನೇ ಅಲೆಯ ನಂತರ ಸಾಲ ಮರುಪಾವತಿ ವಿನಾಯಿತಿ ಅವಧಿಯನ್ನು ವಿಸ್ತರಿಸುವಂತೆ ಸರಕಾರ ಬ್ಯಾಂಕ್‍ಗಳಿಗೆ ಸೂಚಿಸಿದ್ದರೂ  ಹೆಚ್ಚಿನ ಬ್ಯಾಂಕ್‍ಗಳು ಈ ಸೌಲಭ್ಯ ಒದಗಿಸಿಲ್ಲ ಎಂದು ಬಿನು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News