×
Ad

ಫೆ.16ರಂದು ಉಕ್ರೇನ್ ಮೇಲೆ ದಾಳಿಗೆ ರಶ್ಯ ಹುನ್ನಾರ?: ಮಿತ್ರ ರಾಷ್ಟ್ರಗಳಿಗೆ ಬೈಡೆನ್ ಸುಳಿವು

Update: 2022-02-12 22:19 IST

ವಾಶಿಂಗ್ಟನ್, ಫೆ.12: ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಫೆಬ್ರವರಿ 16ರಂದು ಉಕ್ರೇನ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆಯೆಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತನ್ನ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳ ನಾಯಕರೊಂದಿಗೆ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ಸಂದರ್ಭ ಹೇಳಿರುವುದಾಗಿ ವಿಯೋನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಬ್ರಿಟನ್,ಜರ್ಮನಿ, ಇಟಲಿ, ಕೆನಡ, ಪೊಲ್ಯಾಂಡ್, ರೋಮಾನಿಯಾ ಹಾಗೂ ಫ್ರಾನ್ಸ್ ದೇಶಗಳ ನಾಯಕರು ಹಾಗೂ ಯುರೋಪ್ ಒಕ್ಕೂಟದ ಅಧ್ಯಕ್ಷರು ಮಾತುಕತೆಯಲ್ಲಿ ಭಾಗವಹಿಸಿದ್ದರು.
  
ಕ್ಷಿಪಣಿ ದಾಳಿಗಳು ಹಾಗೂ ಸೈಬರ್ದಾಳಿಗಳನ್ನು ನಡೆಸಿದ ಬಳಿಕ ರಶ್ಯವು ಸೈನಿಕ ಆಕ್ರಮಣಕ್ಕೆ ಮುಂದಾಗಲಿದೆಯೆಂದು ಬೈಡೆನ್ ಮಿತ್ರ ರಾಷ್ಟ್ರಗಳ ನಾಯಕರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಆದಾಗ್ಯೂ ಯುರೋಪ್ ಒಕ್ಕೂಟದ ಇಬ್ಬರು ರಾಜತಾಂತ್ರಿಕರು ಪುತಿನ್ ಅವರ ವಾದವನ್ನು ಒಪ್ಪಲು ನಿರಾಕರಿಸಿದ್ದಾರೆ. ಒಂದು ವೇಳೆ ಪುತನ್ ಯುದ್ಧಕ್ಕೆ ಮುಂದಾದಲ್ಲಿ ಅವರು ಅತಿ ದೊಡ್ಡ ಪ್ರಮಾದವನ್ನು ಎಸಗಿದಂತಾಗಲಿದೆ. ಯುದ್ಧವು ತುಂಬಾ ದುಬಾರಿಯಾಗಲಿದೆ ಹಾಗೂ ಉಕ್ರೇನ್ ತನ್ನ ಎಲ್ಲಾ ಸಂಪನ್ಮೂಲ ಮತ್ತು ಬಲವನ್ನು ಕ್ರೋಢೀಕರಿಸಿ ಯುದ್ಧ ಮಾಡಲಿದೆ ಎಂದು ಈ ರಾಜತಾಂತ್ರಿಕರು ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ಹೇಳಿಕೆಯೊಂದನ್ನು ನೀಡಿದ್ದು, ಉಕ್ರೇನ್ ಮೇಲೆ ರಶ್ಯವು ವೈಮಾನಿಕ ಬಾಂಬ್ ದಾಳಿ ಹಾಗೂ ಕ್ಷಿಪಣಿ ದಾಳಿಗಳೊಂದಿಗೆ ಯುದ್ಧವನ್ನು ಪ್ರಾರಂಭಿಸಲಿದೆ. ಬೀಜಿಂಗ್ ಒಲಿಂಪಿಕ್ಸ್ ಕಳೆದ ಬಳಿಕ ಉಕ್ರೇನ್ ಮೇಲೆ ರಶ್ಯ ಸೈನಿಕ ಆಕ್ರಮಣ ನಡೆಸುವ ಸಾಧ್ಯತೆಯಿದೆಯೆಂಬ ಊಹಾಪೋಹಗಳು ಬಲವಾಗಿ ಹರಡಿರುವ ಹೊರತಾಗಿಯೂ, ಒಲಿಂಪಿಕ್ಸ್ ಸೇರಿದಂತೆ ಯಾವುದೇ ಸಮಯದಲ್ಲಿ ಯುದ್ಧ ಆರಂಭಗೊಳ್ಳಬಹುದಾಗಿದೆಯೆಂದು ಅವರು ಹೇಳಿದ್ದಾರೆ.

ಉಕ್ರೇನ್‌ನಿಂದ ನಿರ್ಗಮಿಸುವಂತೆ ರಾಯಭಾರಿ ಕಚೇರಿ ಸಿಬ್ಬಂದಿಗೆ ಅಮೆರಿಕ ಆದೇಶ

ರಶ್ಯದ ಜೊತೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಉಕ್ರೇನ್ ನ ತನ್ನ ರಾಯಭಾರ ಕಚೇರಿಯಲ್ಲಿರುವ ತುರ್ತು ಅವಶ್ಯಕತೆಯಿಲ್ಲದ ಎಲ್ಲಾ ಸಿಬ್ಬಂದಿ ಆ ದೇಶದಿಂದ ನಿರ್ಗಮಿಸುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಶನಿವಾರ ಆದೇಶ ನೀಡಿದೆ.
 
ಒಂದು ವೇಳೆ ರಶ್ಯವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದಲ್ಲಿ ವಾಶಿಂಗ್ಟನ್ ಹಾಗೂ ಅದರ ಮಿತ್ರ ರಾಷ್ಟ್ರಗಳು ಕ್ರೆಮ್ಲಿನ್ ಮೇಲೆ ಅತ್ಯಂತ ಕಠಿಣವಾದ ಆರ್ಥಿಕ ನಿರ್ಬಂಧಗಳನ್ನು ಹೇರಲಾಗುವುದೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.

ಈ ಮಧ್ಯೆ ಬ್ರಿಟನ್ ಉಕ್ರೇನ್ನಲ್ಲಿರುವ ತನ್ನ ನಾಗರಿಕರಿಗೆ ಶನಿವಾರ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದು, ಕೂಡಲೇ ಆ ದೇಶವನ್ನು ತೊರೆಯುವಂತೆ ಸೂಚನೆ ನೀಡಿದೆ. ಒಂದು ವೇಳೆ ರಶ್ಯವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದಲ್ಲಿ ತನ್ನ ಪ್ರಜೆಗಳನ್ನು ಕರೆತರಲು ಯಾವುದೇ ಸೇನಾತೆರವು ಕಾರ್ಯಾಚರಣೆ ನಡೆಸುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ. ಈ ಮಧ್ಯೆ ಯುರೋಪ್ ಒಕ್ಕೂಟದ ರಾಷ್ಟ್ರವಾದ ಜರ್ಮನಿಯು ಕೂಡಾ ಸಾಧ್ಯವಿದ್ದಲ್ಲಿ ಉಕ್ರೇನ್ ತೊರೆಯುವಂತೆ ತನ್ನ ನಾಗರಿಕರಿಗೆ ಸಲಹೆ ನೀಡಿದೆ.

ಉಕ್ರೇನ್ ಮೇಲೆ ಅಕ್ರಮಣಕ್ಕೆ ಸಂಚು: ಅಮೆರಿಕದ ಆರೋಪ ಅಲ್ಲಗಳೆದ ರಶ್ಯ

ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಮಾಸ್ಕೋ ಹುನ್ನಾರ ನಡೆಸುತ್ತಿದೆಯೆಂಬ ಅಮೆರಿಕದ ಆರೋಪವನ್ನು ವಾಶಿಂಗ್ಟನ್ನಲ್ಲಿರುವ ರಶ್ಯದ ರಾಯಭಾರಿ ಅನಾಟೊಲಿ ಆ್ಯಂಟೊನೊವ್ ತಳ್ಳಿಹಾಕಿದ್ದಾರೆ.ಅಮೆರಿಕವು ಯಾವುದೇ ಪುರಾವೆಯಿಲ್ಲದೆ ಇಂತಹ ವದಂತಿಯನ್ನು ಹರಡುತ್ತಿದೆಯೆಂದು ಅವರು ಹೇಳಿದ್ದಾರೆ.

ನಮ್ಮ ದೇಶದ ವಿರುದ್ಧ ಅಮೆರಿಕವುಅಪಪ್ರಚಾರದ ಅಭಿಯಾನವನ್ನು ತೀವ್ರಗೊಳಿಸಿದೆಯೆಂಬುದು ವಾಶಿಂಗ್ಟನ್ನಿಂದ ಹೊರಬರುತ್ತಿರುವ ಹೇಳಿಕೆಗಳು ತೋರಿಸುತ್ತವೆ ಮತ್ತು ಉಕ್ರೇನ್ಮೇಲಿನ ಆಕ್ರಮಣವು ತಪ್ಪಿಸಲಾಗದ್ದು ಎಂಬಂತಹ ಚಿತ್ರಣವನ್ನು ಅದು ಮೂಡಿಸಲು ಬಯಸುತ್ತಿದೆ ಎಂದು ಆ್ಯಂಟೊನೊವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News