ಉಕ್ರೇನ್ ಬಳಿ ರಶ್ಯಾದ ಬೃಹತ್ ಸೇನಾ ನಿಯೋಜನೆ: ಉಪಗ್ರಹ ಚಿತ್ರಗಳಿಂದ ದೃಢ

Update: 2022-02-13 18:12 GMT
photo:satellite image ©2022maxar techonologies

ಲಂಡನ್, ಫೆ.13: ಉಕ್ರೇನ್ ಮೇಲೆ ರಶ್ಯಾದ ಸಂಭವನೀಯ ಆಕ್ರಮಣದ ಆತಂಕದ ನಡುವೆಯೇ, ಬೆಲಾರೂಸ್, ಕ್ರಿಮಿಯಾ ಮತ್ತು ಪಶ್ಚಿಮ ರಶ್ಯಾದಲ್ಲಿ ಬೃಹತ್ ಪ್ರಮಾಣದಲ್ಲಿ ರಶ್ಯಾದ ಸೇನೆಯನ್ನು ನಿಯೋಜಿಸಿರುವುದು ಉಪಗ್ರಹಗಳಿಂದ ಲಭಿಸಿದ ಚಿತ್ರಗಳಿಂದ ದೃಢಪಟ್ಟಿರುವುದಾಗಿ ಮೂಲಗಳು ಹೇಳಿವೆ.

ಕ್ರಿಮಿಯಾದ ಒಕ್ಟ್ಯಾಬ್ರೊಸ್ಕೆಯಿ ವಾಯುನೆಲೆಯಲ್ಲಿ ಹೆಚ್ಚುವರಿ ತುಕಡಿ ಹಾಗೂ ಶಸ್ತ್ರಾಸ್ತ್ರಗಳನ್ನು ನೆಲೆಗೊಳಿಸಿರುವುದು ಫೆಬ್ರವರಿ 10ರಂದು ಲಭಿಸಿದ ಉಪಗ್ರಹ ಚಿತ್ರದಿಂದ ದೃಢಪಟ್ಟಿದೆ. 550ಕ್ಕೂ ಹೆಚ್ಚು ಸೇನಾಪಡೆಗಳ ಡೇರೆ ಹಾಗೂ ನೂರಾರು ವಾಹನಗಳನ್ನು ಈ ಪರಿತ್ಯಕ್ತ ವಾಯುನೆಲೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಡೊನುಝ್ಲಿವ್ ಸರೋವರದ ದಡದಲ್ಲಿರುವ ನೊವೂಝೆರ್ನೋಯ್ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳು ಹಾಗೂ ಸಾಧನಗಳು ಆಗಮಿಸಿವೆ. ನೊವೂಝೆರ್ನೋಯ್ ಬಳಿ ವ್ಯಾಪಕ ಫಿರಂಗಿ ನಿಯೋಜನೆ ಹಾಗೂ ತರಬೇತ ಚಟುವಟಿಕೆಗಳು ಕಂಡುಬಂದಿದೆ. ಕ್ರಿಮಿಯಾ ಪರ್ಯಾಯ ದ್ವೀಪದ ವಾಯವ್ಯ ತೀರದ ಸ್ಲಾವ್ನೆ ನಗರದ ಬಳಿಯೂ ವ್ಯಾಪಕ ಸೇನಾ ನಿಯೋಜನೆ ಕಂಡುಬಂದಿದೆ.

ಉಕ್ರೇನ್ ಗಡಿಯಿಂದ 25 ಕಿ.ಮೀ ದೂರದಲ್ಲಿರುವ ಬೆಲಾರೂಸ್‌ನ ಗೊಮೆಲ್ ಬಳಿಯ ಝ್ಯಬ್ರೊವ್ಕ ವಾಯುನೆಲೆಯಲ್ಲಿ ಹೆಚ್ಚುವರಿ ತುಕಡಿ, ಸೇನಾ ವಾಹನಗಳು ಹಾಗೂ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ. ರೆಚಿಸ್ಟಾ ನಗರದಲ್ಲೂ ಹೆಚ್ಚುವರಿ ತುಕಡಿ ಹಾಗೂ ಸೇನಾ ವಾಹನಗಳು ಕಂಡುಬಂದಿವೆ. ಪೂರ್ವ ರಶ್ಯಾದ ಕರ್ಸ್ಕ್ ತರಬೇತಿ ಶಿಬಿರದಲ್ಲೂ ಭಾರೀ ಸಂಖ್ಯೆಯಲ್ಲಿ ಯೋಧರ ತಂಡ ಜಮಾವಣೆಗೊಂಡಿದೆ. ಇನ್ನಷ್ಟು ಯೋಧರಿಗೆ ನೆಲೆ ಕಲ್ಪಿಸಲು ಹೆಚ್ಚುವರಿ ಟೆಂಟ್‌ಗಳನ್ನು ಸ್ಥಾಪಿಸಿರುವುದು ಉಪಗ್ರಹದಿಂದ ಲಭಿಸಿದ ಚಿತ್ರಗಳಿಂದ ದೃಢಪಟ್ಟಿರುವುದಾಗಿ ಮೂಲಗಳು ಹೇಳಿವೆ.

ಈ ಮಧ್ಯೆ, ಉಕ್ರೇನ್ ಗೆ ಸಂಬಂಧಿಸಿದ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ರಶ್ಯಾದ ಮಧ್ಯೆ ಶನಿವಾರ ಫೋನ್ ಮೂಲಕ ನಡೆದ ರಾಜತಾಂತ್ರಿಕ ಪ್ರಯತ್ನ ವಿಫಲಗೊಂಡಿದೆ. ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ರಶ್ಯಾ ತ್ವರಿತ ಮತ್ತು ತೀವ್ರ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಶ್ಯಾ ಅಧ್ಯಕ್ಷ ಪುಟಿನ್, ಇಂತಹ ಹೇಳಿಕೆಗಳು ಈ ಹಿಂದಿನ ಸೋವಿಯತ್ ಯೂನಿಯನ್ ಭಾಗವಾಗಿದ್ದ ಉಕ್ರೇನ್‌ನಲ್ಲಿ ಸಂಘರ್ಷಕ್ಕೆ ಕಾರಣವಾಗುವ ಪ್ರಚೋದನಕಾರಿ ಊಹಾಪೋಹಗಳಾಗಿವೆ ಎಂದಿದ್ದಾರೆ.

ಪೆಸಿಫಿಕ್ ದ್ವೀಪ: ಅಮೆರಿಕದ ಸಬ್ಮೆರೀನ್ ಬೆನ್ನಟ್ಟಿದ ರಶ್ಯಾದ ಯುದ್ಧನೌಕೆ 

ಪೆಸಿಫಿಕ್ ದ್ವೀಪದ ಕುರಿಲ್ ದ್ವೀಪದ ಬಳಿ ಬಂದಿದ್ದ ಅಮೆರಿಕದ ಸಬ್ಮೆರಿನ್ ಅನ್ನು ರಶ್ಯಾದ ಸಬ್ಮೆರಿನ್ (ಜಲಾಂತರ್ಗಾಮಿ) ವಿಧ್ವಂಸಕ ಯುದ್ಧನೌಕೆ ಬೆನ್ನಟ್ಟಿದ್ದು ಬಳಿಕ ಅಮೆರಿಕದ ಸಬ್ಮೆರಿನ್ ರಶ್ಯಾದ ಸಮುದ್ರವ್ಯಾಪ್ತಿಯಿಂದ ದೂರ ಸರಿದಿದೆ ಎಂದು ರಶ್ಯಾ ಶನಿವಾರ ಹೇಳಿದೆ.

ಆದರೆ ಈ ಹೇಳಿಕೆಯನ್ನು ಅಮೆರಿಕದ ಸೇನೆ ತಿರಸ್ಕರಿಸಿದೆ. ಶನಿವಾರ ನಡೆಯುತ್ತಿದ್ದ ಮಿಲಿಟರಿ ಕವಾಯತಿನ ಸಂದರ್ಭ ಮಾರ್ಷಲ್ ಶಪೊಶ್ನಿಕೋವ್ ಎಂಬ ರಶ್ಯಾದ ಯುದ್ಧನೌಕೆಯು ಕುರಿಲ್ ದ್ವೀಪದ ಬಳಿ ರಶ್ಯಾದ ಸಮುದ್ರವ್ಯಾಪ್ತಿಯಲ್ಲಿದ್ದ ಅಮೆರಿಕ ಸೇನಾಪಡೆಯ ಸಬ್ಮೆರಿನ್ ಅನ್ನು ಪತ್ತೆಹಚ್ಚಿದೆ. ನೀರಿನ ಮೇಲೆ ಬರುವಂತೆ ನೀಡಿದ ಸೂಚನೆಯನ್ನು ಸಬ್ಮೆರಿನ್ ತಿರಸ್ಕರಿಸಿದಾಗ ರಶ್ಯಾದ ಯುದ್ಧನೌಕೆ ಸೂಕ್ತ ವಿಧಾನವನ್ನು ಬಳಸಿತು . ಆಗ ಅಮೆರಿಕದ ಸಬ್ಮೆರಿನ್ ವೇಗವಾಗಿ ಅಲ್ಲಿಂದ ತೆರಳಿತು ಎಂದು ರಶ್ಯಾದ ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ, ಮಾಸ್ಕೋದಲ್ಲಿನ ಅಮೆರಿಕ ರಕ್ಷಣಾ ಪಡೆಯ ಪ್ರತಿನಿಧಿಯನ್ನು ರಶ್ಯಾದ ರಕ್ಷಣಾ ಸಚಿವಾಲಯಕ್ಕೆ ಕರೆಸಿಕೊಂಡು ಖಂಡನೆ ಸಲ್ಲಿಸಲಾಗಿದೆ ಎಂದು ರಶ್ಯಾದ ರಕ್ಷಣಾ ಇಲಾಖೆ ಹೇಳಿದೆ.

ಆದರೆ ಅಮೆರಿಕದ ಸಬ್ಮೆರಿನ್ ರಶ್ಯಾದ ಸಮುದ್ರವ್ಯಾಪ್ತಿಯಲ್ಲಿ ಕಂಡುಬಂದಿದೆ ಎಂಬ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ನಾವು ಅಂತರಾಷ್ಟ್ರೀಯ ಸಮುದ್ರವ್ಯಾಪ್ತಿಯಲ್ಲಿ ಸುರಕ್ಷಿತವಾಗಿ ಸಂಚರಿಸಬಹುದು ಎಂದು ಅಮೆರಿಕ ಇಂಡೊ-ಪೆಸಿಫಿಕ್ ಸೇನಾನೆಲೆಯ ವಕ್ತಾರ ಕ್ಯಾಪ್ಟನ್ ಕೈಲ್ ರೈನ್ಸ್ ಪ್ರತಿಕ್ರಿಯಿಸಿದ್ದಾರೆ. ಜಪಾನ್ ನ ಹೊಕೈಡೋ ದ್ವೀಪದ ಉತ್ತರದಲ್ಲಿರುವ ಕುರಿಲ್ಸ್ ದ್ವೀಪವು 2ನೇ ವಿಶ್ವಯುದ್ಧದ ಸಂದರ್ಭ ಸೋವಿಯತ್ ಯೂನಿಯನ್ನ ವಶಕ್ಕೆ ಬಂದಿತ್ತು.

ಬಿಕ್ಕಟ್ಟು ಪರಿಹಾರಕ್ಕೆ ರಾಜತಾಂತ್ರಿಕ ಕ್ರಮ: ಪುಟಿನ್ ಜತೆ ಬೈಡನ್ ಮಾತುಕತೆ 

ಉಕ್ರೇನ್ ಗಡಿಭಾಗದಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಕ್ರಮ ಮುಂದುವರಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶನಿವಾರ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ದೂರವಾಣಿಯ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕದ ಶ್ವೇತಭವನ ಹೇಳಿದೆ.

ರಶ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ, ನಮ್ಮ ಎಲ್ಲಾ ಮಿತ್ರರು ಹಾಗೂ ಸಹಭಾಗಿಗಳೊಂದಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ರಶ್ಯಾದ ವಿರುದ್ಧ ತ್ವರಿತ ಮತ್ತು ತೀವ್ರ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾಜತಾಂತ್ರಿಕ ಕ್ರಮದ ಬಗ್ಗೆ ನಮ್ಮ ಆದ್ಯತೆಯಿದ್ದರೂ, ಇತರ ಕ್ರಮಗಳ ಬಗ್ಗೆಯೂ ನಾವು ಸಿದ್ಧತೆ ನಡೆಸಿಕೊಂಡಿದ್ದೇವೆ ಎಂದು ಬೈಡನ್ ಸ್ಪಷ್ಟಮಾತುಗಳಲ್ಲಿ ಹೇಳಿರುವುದಾಗಿ ಶ್ವೇತಭವನದ ಹೇಳಿಕೆ ತಿಳಿಸಿದೆ. 

ಒಂದು ಗಂಟೆಗೂ ಅಧಿಕ ಕಾಲ ನಡೆದ ಉಭಯ ಮುಖಂಡರ ಮಾತುಕತೆ ವೃತ್ತಿಪರ ಮತ್ತು ವಸ್ತುನಿಷ್ಟ ರೀತಿಯಲ್ಲಿ ನಡೆದರೂ, ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಯಾವುದೇ ಮೂಲಭೂತ ಬದಲಾವಣೆ ತರಲು ವಿಫಲವಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಶ್ಯಾವು ಒಂದು ಘಟನೆಯನ್ನು ಪ್ರಚೋದಿಸಿ ಆ ಮೂಲಕ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವ ತಂತ್ರ ನಡೆಸಿದರೂ ಅಚ್ಚರಿಯಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ರಶ್ಯಾದ ವಿದೇಶಾಂಗ ಕಾರ್ಯದರ್ಶಿ ಸೆರ್ಗೆಯ್ ಲಾವ್ರೋವ್ ಅವರೊಂದಿಗೆ ಶನಿವಾರ ದೂರವಾಣಿ ಸಂಭಾಷಣೆ ನಡೆಸಿದ ಬಳಿಕ ಅವರು ಸುದ್ಧಿಗಾರರ ಜತೆ ಮಾತನಾಡಿದರು.

ಈ ಮಧ್ಯೆ, ರಶ್ಯಾ ಅಧ್ಯಕ್ಷ ಪುಟಿನ್ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಜತೆ ಸುಮಾರು 2 ಗಂಟೆ ದೂರವಾಣಿ ಸಂಭಾಷಣೆ ನಡೆಸಿದ್ದು, ಉಭಯ ಮುಖಂಡರೂ ಮಾತುಕತೆ ಮತ್ತು ಸಮಾಲೋಚನೆ ಮುಂದುವರಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಫ್ರಾನ್ಸ್ ನ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್ ನಿಂದ ಕೆಲವು ರಾಜತಾಂತ್ರಿಕ ಸಿಬ್ಬಂದಿಗಳನ್ನು ವಾಪಾಸು ಕರೆಸಿಕೊಂಡ ರಶ್ಯಾ

ಉಕ್ರೇನ್‌ನಲ್ಲಿರುವ ತನ್ನ ರಾಜತಾಂತ್ರಿಕ ಸಿಬಂದಿಗಳಲ್ಲಿ ಕೆಲವರನ್ನು ರಶ್ಯಾ ವಾಪಾಸು ಕರೆಸಿಕೊಳ್ಳುವ ಮೂಲಕ ಮತ್ತಷ್ಟು ಕಠಿಣ ಸಂದೇಶ ರವಾನಿಸಿದೆ.

ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಗಮನಿಸಿ, ಅಲ್ಲಿ ನಡೆಯಬಹುದಾದ ಸಂಭವನೀಯ ಪ್ರಚೋದನಕಾರಿ ಕ್ರಮಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಶ್ಯಾದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ಈ ಮಧ್ಯೆ,ಉಕ್ರೇನ್‌ನಿಂದ ಸಾಧ್ಯವಾದಷ್ಟು ಬೇಗ ತೆರಳುವಂತೆ ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ಯೂನಿಯನ್ನ ಕೆಲ ದೇಶಗಳು ತಮ್ಮ ಪ್ರಜೆಗಳಿಗೆ ಸಲಹೆ ನೀಡಿದ್ದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಉಕ್ರೇನ್‌ನಲ್ಲಿದ್ದ ಸೇನಾ ಸಲಹೆಗಾರರನ್ನು ಅಮೆರಿಕ ಮತ್ತು ಬ್ರಿಟನ್ ವಾಪಾಸು ಕರೆಸಿಕೊಂಡಿದೆ. ಉಕ್ರೇನ್ ಬಿಟ್ಟುತೆರಳುವಂತೆ ಬಹುತೇಕ ರಾಜತಾಂತ್ರಿಕ ಸಿಬಂದಿಗಳಿಗೆ ಅಮೆರಿಕ ಸೂಚಿಸಿದೆ.

ಆಸ್ಟ್ರೇಲಿಯಾವೂ ಇದೇ ಕ್ರಮ ಕೈಗೊಂಡಿದೆ. ಉಕ್ರೇನ್‌ನಲ್ಲಿನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಿರುವುದಾಗಿ ಕೆನಡಾ ಘೋಷಿಸಿದೆ. ಮುಂದಿನ ಸೂಚನೆಯವರೆಗೆ, ಉಕ್ರೇನ್‌ಗೆ ತೆರಳುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಗೊಳಿಸುವುದಾಗಿ ಹಾಲಂಡಿನ ವಿಮಾನಯಾನ ಸಂಸ್ಥೆ ಕೆಎಲ್ಎಮ್ ಘೋಷಿಸಿದೆ.

ಈಗಿನ ಸಮಯದಲ್ಲಿ ಜನತೆಯ ಅತೀ ದೊಡ್ಡ ಶತ್ರು ಎಂದರೆ ದಿಗಿಲುಗೊಳ್ಳುವುದು. ಜನತೆ ತಾಳ್ಮೆಯಿಂದ ಇರಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆಂಸ್ಕಿ ಹೇಳಿದ್ದಾರೆ.

ಅಮೆರಿಕದ ವರ್ತನೆ ಉನ್ಮಾದದ ಪರಾಕಾಷ್ಟೆ: ರಶ್ಯಾ ಟೀಕೆ 

ಉಕ್ರೇನ್ ವಿಷಯಕ್ಕೆ ಸಂಬಂಧಿಸಿ ಅಮೆರಿಕವು ಉನ್ಮಾದದ ಪರಾಕಾಷ್ಟೆಗೆ ತಲುಪಿದೆ ಎಂದು ರಶ್ಯಾದ ವಿದೇಶ ವ್ಯವಹಾರ ಇಲಾಖೆಯ ಹಿರಿಯ ಸಲಹೆಗಾರ ಯೂರಿ ಉಷಕೋವ್ ಹೇಳಿದ್ದಾರೆ.

ಉಕ್ರೇನ್ ವಿಷಯದಲ್ಲಿ ಅಮೆರಿಕ ಉನ್ಮಾದದ ರೀತಿಯಲ್ಲಿ ವರ್ತಿಸುತ್ತಿದ್ದರೂ ಆ ದೇಶದ ಅಧ್ಯಕ್ಷರೊಂದಿಗೆ ಮಾತುಕತೆ ಮುಂದುವರಿಸಲು ಅಧ್ಯಕ್ಷ ಪುಟಿನ್ ನಿರ್ಧರಿಸಿದ್ದಾರೆ . ಶನಿವಾರದ ದೂರವಾಣಿ ಮಾತುಕತೆ ಅಮೆರಿಕದ ಕೋರಿಕೆ ಮೇರೆಗೆ ನಡೆದಿತ್ತು. ಸೋಮವಾರ ಈ ಮಾತುಕತೆ ನಡೆಸಲು ರಶ್ಯಾ ಯೋಜಿಸಿತ್ತು ಎಂದವರು ಹೇಳಿದ್ದಾರೆ.

ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣ ಯಾವುದೇ ದಿನ ನಡೆಯಬಹುದು ಎಂಬ ಅಮೆರಿಕದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಮೆರಿಕನ್ನರು ರಶ್ಯಾದ ಆಕ್ರಮಣದ ದಿನಾಂಕವನ್ನೂ ಬಿಡುಗಡೆಗೊಳಿಸಿದ್ದಾರೆ ಎಂದು ಛೇಡಿಸಿದರು.

ನಮ್ಮ ಉದ್ದೇಶಗಳ ಬಗ್ಗೆ ತಪ್ಪು ಮಾಹಿತಿಯನ್ನು ಮಾಧ್ಯಮದವರಿಗೆ ರವಾನಿಸಿರುವ ಬಗ್ಗೆ ನಮಗೆ ಅರ್ಥವಾಗುತ್ತಿಲ್ಲ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿವೆ ಮತ್ತು ಪೂರ್ವ ಉಕ್ರೇನ್‌ನಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನವನ್ನು ಉಕ್ರೇನ್ ಅಧಿಕಾರಿಗಳು ಹಾಳುಗೆಡವುತ್ತಿದ್ದಾರೆ ಎಂದು ಉಷಕೋವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News