ಉಡುಪಿ: ಕೌಶಲ್ಯಾಭಿವೃದ್ಧಿ ಜಿಲ್ಲಾ ಘಟಕದ ಕಚೇರಿ ಉದ್ಘಾಟನೆ

Update: 2022-02-14 16:10 GMT

ಉಡುಪಿ, ಫೆ.14: ಉಡುಪಿ ಜಿಪಂನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ತ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ವಹಣಾ ಘಟಕದ ಸುಸಜ್ಜಿತ ನೂತನ ಕಚೇರಿಯನ್ನು ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಅವರು ಇಂದು ಉದ್ಘಾಟಿಸಿದರು.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದ ಮೊದಲನೇ ಮಹಡಿಯಲ್ಲಿ ಪ್ರಾರಂಭಗೊಂಡ ಕಚೇರಿಯನ್ನು ಉದ್ಘಾಟಿಸಿದ ಜಿಪಂ ಸಿಇಓ ಡಾ.ಭಟ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಜೀವಿನಿ ಯೋಜನೆ ಮತ್ತು ಸಿಬ್ಬಂದಿಗಳ ದಕ್ಷ ಕಾರ್ಯಕ್ಷಮತೆಯೊಂದಿಗೆ ರಾಷ್ಟ್ರಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಸಂಜೀವಿನಿ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು. ಮುಂದಿನ ದಿನಗಳಲ್ಲಿ ಎನ್‌ಆರ್‌ಎಲ್‌ಎಂ ಮತ್ತು ಇತರೆ ಯೋಜನೆಗಳು ಸೇರಿ ಉತ್ತಮ ಇ - ಪತ್ರಿಕೆ ಸಿದ್ದಪಡಿಸಿ ಯೋಜನೆಗಳು ಗ್ರಾಮ ಮಟ್ಟಕ್ಕೂ ತಲುಪುವಂತೆ ಮಾಡಲು ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಪಂನ ಯೋಜನಾ ನಿರ್ದೇಶಕ ಬಾಬು ಎಂ., ಮುಖ್ಯ ಲೆಕ್ಕಾಧಿಕಾರಿ ಪ್ರಸನ್ನ ಭಕ್ತಾ, ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್‌ಬಾಬು ಮಾತನಾಡಿದರು.

ಜಿಲ್ಲಾ ಪಂಚಾಯತ್‌ನ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ಪ್ರಾಸ್ತಾವಿಕ ಮಾತನಾಡಿದರು. ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವ್ಯವಸ್ಥಾಪಕಿ ನವ್ಯಾ ಸ್ವಾಗತಿಸಿ, ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News