ಉಡುಪಿ: ಮಾನ್ಯತೆ ಇಲ್ಲದ ಕರಾಟೆ ಸಂಸ್ಥೆಗಳಿಂದ ವಂಚನೆ; ಆರೋಪ

Update: 2022-02-14 18:32 GMT

ಉಡುಪಿ, ಫೆ.14: ಕರಾಟೆ ಪಂದ್ಯಾಟ, ತರಬೇತಿಗೆ ಸಂಬಂಧಿಸಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಾನ್ಯತೆ ಪಡೆಯದೆ ಅನಧಿಕೃತ ಸಂಸ್ಥೆ ಫೆಡರೇಶನ್‌ನ ಲೋಗೋ ಬಳಸಿಕೊಂಡು ಮಕ್ಕಳು ಹಾಗೂ ಪೋಷಕರಿಂದ ಸಾವಿರಾರು ರೂ. ವಸೂಲಿ ಮಾಡಿ ಮಾನ್ಯತೆ ಇಲ್ಲದ ಸರ್ಟಿಫಿಕೇಟ್ ನೀಡುತ್ತಿದೆ. ಇಂತಹವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದೆಂದು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಮುಖ್ಯ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಕೀರ್ತಿ ಜಿ.ಕೆ. ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಕರಾಟೆ ಇಂಡಿಯಾ ಆರ್ಗನೈಜೇಶನ್(ಕೆಐಒ) ಏಕೈಕ ಸಂಸ್ಥೆಯಾಗಿದೆ. ವಿಶ್ವ ಕರಾಟೆ ಫೆಡರೇಶನ್, ಏಷ್ಯನ್ ಕರಾಟೆ ಫೆಡರೇಶನ್, ಸೌತ್ ಈಸ್ಟ್ ಏಷ್ಯನ್ ಕರಾಟೆ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಮಾನ್ಯತೆಯನ್ನು ಪಡೆದ ಏಕೈಕ ರಾಷ್ಟ್ರೀಯ ಫೆಡರೇಶನ್ ಆಗಿದೆ. ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಈ ಎಲ್ಲಾ ಸಂಸ್ಥೆಗಳ ಮಾನ್ಯತೆ ಹಾಗೂ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ಪಡೆದ ಸಂಸ್ಥೆ ಇದಾಗಿದೆ ಎಂದರು.

ಅಖಿಲ ಕರ್ನಾಟಕ ಸ್ಪೋರ್ಟ್ಸ್ ಆಸೋಸಿಯೇಶನ್ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಧಿಕೃತವಾಗಿ ಜಿಲ್ಲಾ ಅಸೋಸಿಯೇಶನ್ ರಚನೆಗೊಂಡು ಆ ಮೂಲಕ ಶಾಲೆ, ಕಾಲೇಜು, ವಸತಿ ನಿಲಯ ಹಾಗೂ ಸಾರ್ವಜನಿಕರಿಗೆ ಕರಾಟೆ ತರಬೇತಿ ನೀಡುತ್ತಿದೆ. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೆಲ ಕೋರ್ಸ್‌ಗಳಿಗೆ ಉಚಿತ ಸೀಟ್ ಸಿಗುತ್ತಿದೆ. ಆದರೆ ಇತ್ತೀಚೆಗೆ ಕೆಲ ಜಿಲ್ಲೆಗಳಲ್ಲಿ ಮಾನ್ಯತೆ ಇಲ್ಲದ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ವಂಚನೆಯಾಗುತ್ತಿದೆ ಎಂದು ಅವರು ದೂರಿದರು.

ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಗೌರವಾಧ್ಯಕ್ಷ ಕೆ.ಆನಂದ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಉದ್ಯಾವರ, ಜಂಟಿ ಕಾರ್ಯದರ್ಶಿ ಸಂತೋಷ್ ಸುವರ್ಣ, ಬಿ.ಟಿ.ಅಂಕಿತಾ, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News