ಏಳು ರಾಜ್ಯಗಳಲ್ಲಿ ಈ ವ್ಯಕ್ತಿ ಎಷ್ಟು ವಿವಾಹವಾಗಿದ್ದ ಗೊತ್ತೇ?

Update: 2022-02-15 02:37 GMT

ಭುವನೇಶ್ವರ: ಕಳೆದ ನಲುವತ್ತೆಂಟು ವರ್ಷಗಳಲ್ಲಿ ಏಳು ರಾಜ್ಯಗಳಲ್ಲಿ ಹದಿನಾಲ್ಕು ಮಹಿಳೆಯರನ್ನು ವಿವಾಹವಾಗಿದ್ದ 60 ವರ್ಷದ ವ್ಯಕ್ತಿಯನ್ನು ಸೋಮವಾರ ಭುವನೇಶ್ವರ ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಾಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಈ ವ್ಯಕ್ತಿ, ಮಹಿಳೆಯರಿಗೆ ಕೈಕೊಟ್ಟು ಪಲಾಯನ ಮಾಡುವ ಮುನ್ನ ಅವರ ಹಣವನ್ನೂ ದೋಚಿಕೊಂಡು ಹೋಗುತ್ತಿದ್ದ ಎಂದು ಆಪಾದಿಸಲಾಗಿದೆ. ಆದರೆ ಬಂಧಿತ ವ್ಯಕ್ತಿ ಈ ಆರೋಪಗಳನ್ನು ನಿರಾಕರಿಸಿದ್ದಾನೆ.

ಈ ವ್ಯಕ್ತಿ 1982ರಲ್ಲಿ ಮೊದಲ ವಿವಾಹವಾಗಿದ್ದ. 2002ರಲ್ಲಿ ಎರನೇ ವಿವಾಹವಾಗಿದ್ದ. ಈ ಎರಡು ವಿವಾಹಗಳಿಂದ ಐದು ಮಕ್ಕಳನ್ನು ಪಡೆದಿದ್ದ ಎಂದು ಡಿಸಿಪಿ ಉಮಾಶಂಕರ್ ಡ್ಯಾಷ್ ಹೇಳಿದ್ದಾರೆ. 2002ರಿಂದ 2020ರ ನಡುವೆ ವೈವಾಹಿಕ ವೆಬ್‌ಸೈಟ್‌ಗಳಲ್ಲಿ ಇತರ ಮಹಿಳೆಯರ ಸ್ನೇಹ ಬೆಳೆಸಿ, ಈಗಾಗಲೇ ವಿವಾಹವಾಗಿರುವ ವಿಷಯ ಮುಚ್ಚಿಟ್ಟು ಅವರನ್ನು ವಿವಾಹವಾಗಿದ್ದ ಎಂದು ವಿವರಿಸಿದ್ದಾರೆ.

ಕೊನೆಯ ಪತ್ನಿಯ ಜತೆಗೆ ಒಡಿಶಾ ರಾಜಧಾನಿಯಲ್ಲಿ ಈ ವ್ಯಕ್ತಿ ವಾಸವಿದ್ದ. ಈತನ ಕೊನೆಯ ಪತ್ನಿ ದೆಹಲಿಯಲ್ಲಿ ಶಿಕ್ಷಕಿ. ಈತನ ಹಿಂದಿನ ವಿವಾಹಗಳ ಬಗ್ಗೆ ಸುಳಿವು ಸಿಕ್ಕಿದ ಆಕೆ ಪೊಲೀಸರಿಗೆ ದೂರು ನೀಡಿದಳು ಎನ್ನಲಾಗಿದೆ. ಬಾಡಿಗೆ ಮನೆಯಿಂದ ಆತನನ್ನು ಬಂಧಿಸಲಾಗಿದೆ. ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಅದರಲ್ಲೂ ಮುಖ್ಯವಾಗಿ ವಿಚ್ಛೇದಿತರಾಗಿ ವೆಬ್‌ಸೈಟ್‌ಗಳಲ್ಲಿ ಸಂಗಾತಿ ಬಯಸಿದ್ದ ಮಹಿಳೆಯರನ್ನು ಗುರಿ ಮಾಡುತ್ತಿದ್ದ ಎಂದು ಡಿಸಿಪಿ ವಿವರಿಸಿದ್ದಾರೆ. ಅವರನ್ನು ಬಿಡುವ ಮುನ್ನ ಅವರ ಹಣವನ್ನು ದೋಚುತ್ತಿದ್ದ ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News