ಸುರೇಶ್ ರೈನಾರನ್ನು ಆಯ್ಕೆ ಮಾಡದೆ ಇರುವುದಕ್ಕೆ ಕಾರಣ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ

Update: 2022-02-15 05:58 GMT

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ದಂತಕಥೆ, ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಎರಡು ದಿನಗಳ ಐಪಿಎಲ್ ಹರಾಜಿನ 2022 ರ ಸಮಯದಲ್ಲಿ ಮಾರಾಟವಾಗದೆ ಉಳಿದರು. ಹಲವು ವರ್ಷಗಳಿಂದ  ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಗಾಗಿ ರೈನಾ ಅವರ ಅದ್ಭುತ ಪ್ರದರ್ಶನಗಳನ್ನು ಗಮನಿಸಿರುವ ಅನೇಕ ಅಭಿಮಾನಿಗಳಿಗೆ  ಇದು ಭಾರೀ ಆಶ್ಚರ್ಯವನ್ನುಂಟು ಮಾಡಿದೆ. 2011 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೈನಾ ಅವರು ಮೊದಲ ಹಂತದಲ್ಲಿ 2008 ರಿಂದ 2015 ರವರೆಗೆ ಸಿಎಸ್ ಕೆ ಅನ್ನು ಪ್ರತಿನಿಧಿಸಿದರು. ಮತ್ತೊಮ್ಮೆ, ಅವರು 2018 ರಿಂದ 2021 ರವರೆಗೆ ಸಿಎಸ್ ಕೆ ಗಾಗಿ ಆಡಿದರು. ಅವರು 205  ಐಪಿಎಲ್ ಪಂದ್ಯಗಳಿಂದ 5,528 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ಐಪಿಎಲ್ ವೃತ್ತಿಜೀವನದಲ್ಲಿ ಅವರು ಸಿಎಸ್ ಕೆ ಪರವಾಗಿ 4,687 ರನ್ ಗಳನ್ನು ದಾಖಲಿಸಿದ್ದಾರೆ.

ಯೂಟ್ಯೂಬ್‌ನಲ್ಲಿ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್  ಸಿಇಒ ಕಾಸಿ ವಿಶ್ವನಾಥ್, ರೈನಾಗೆ ಫ್ರಾಂಚೈಸಿ ಏಕೆ ಬಿಡ್ ಮಾಡಲಿಲ್ಲ ಎಂದು ವಿವರಿಸಿದರು.

"ರೈನಾ ಕಳೆದ 12 ವರ್ಷಗಳಿಂದ ಸಿಎಸ್ ಕೆ ಪರ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿದವರ ಪೈಕಿ ಒಬ್ಬರಾಗಿದ್ದಾರೆ. ಸಹಜವಾಗಿ ನಮಗೆ ರೈನಾ ಇಲ್ಲದಿರುವುದು ತುಂಬಾ ಕಷ್ಟಕರವಾಗಿದೆ.  ಆದರೆ ಅದೇ ಸಮಯದಲ್ಲಿ, ತಂಡದ ಸಂಯೋಜನೆಯು ಆಟಗಾರರ ಫಾರ್ಮ್ ಅನ್ನು ಅವಲಂಬಿಸಿರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.ಆದ್ದರಿಂದ ಅವರು ಈ ತಂಡಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ನಾವು ಭಾವಿಸಲು ಇದು ಒಂದು ಕಾರಣ" ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022 ರ ಹರಾಜಿನ ಸಮಯದಲ್ಲಿ ಚೆನ್ನೈ ತಂಡವು ದೀಪಕ್ ಚಹಾರ್ ಅವರನ್ನು 14 ಕೋಟಿ ರೂ.ಗಳಿಗೆ ಖರೀದಿಸಿತು.  ಪಂದ್ಯಾವಳಿಯ ಇತಿಹಾಸದಲ್ಲಿ ದೀಪಕ್  ಅತ್ಯಂತ ದುಬಾರಿ ಭಾರತೀಯ ಬೌಲರ್ ಆಗಿ ಹೊರ ಹೊಮ್ಮಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News