ಉತ್ತರಪ್ರದೇಶದ ಸಿಎಂ ಆದಿತ್ಯನಾಥ್ ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ: ಎಸ್ಪಿ ಮೈತ್ರಿಪಕ್ಷದ ನಾಯಕ ಆರೋಪ

Update: 2022-02-15 07:00 GMT

ಲಕ್ನೊ: ಉತ್ತರ ಪ್ರದೇಶದ ಮುಖ್ಯಮಂತ್ರಿ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರು ಆರೋಪಿಸಿದ್ದಾರೆ.

ಒಪಿ ರಾಜ್‌ಭರ್ ಹಾಗೂ  ಅವರ ಪುತ್ರ ಅರವಿಂದ್ ರಾಜ್‌ಭರ್ ಅವರು ಸೋಮವಾರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ವಕೀಲರಿಂದ ತೀವ್ರ ವಿರೋಧವನ್ನು ಎದುರಿಸಿದ ನಂತರ ಅವರು ಈ ಆರೋಪ ಮಾಡಿದರು. ರಾಜ್ ಭರ್ ಹೇಳಿಕೆಯನ್ನು ಬಿಜೆಪಿ ತಳ್ಳಿ ಹಾಕಿದೆ.

ಅರವಿಂದ್ ತಮ್ಮ ನಾಮಪತ್ರ ಸಲ್ಲಿಸಲು ವಾರಣಾಸಿಯ ಶಿವಪುರದ ನ್ಯಾಯಾಲಯವನ್ನು ತಲುಪುತ್ತಿದ್ದಂತೆ ಹಲವಾರು ವಕೀಲರು "ಜೈ ಶ್ರೀ ರಾಮ್" ಎಂದು ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ರಾಜ್‌ಭರ್ ಬೆಂಬಲಿಗರು "ಜೈ ಅಖಿಲೇಶ್" ಎಂಬ ಘೋಷಣೆಗಳನ್ನು ಎತ್ತಿದರು. ನಾಮಪತ್ರ ಸಲ್ಲಿಕೆ ಬಳಿಕ ಒ.ಪಿ.ರಾಜ್ ಭರ್ ಜಿಲ್ಲಾ ಚುನಾವಣಾಧಿಕಾರಿಯಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿದರು.

ಯುಪಿ ಚುನಾವಣೆಯಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ

 “ಶಿವಪುರ ವಿಧಾನಸಭಾ ಕ್ಷೇತ್ರದಿಂದ ಎಸ್‌ಪಿ-ಎಸ್‌ಬಿಎಸ್‌ಪಿ ಮೈತ್ರಿ ಅಭ್ಯರ್ಥಿ ಅರವಿಂದ್ ನಾಮಪತ್ರ ಸಲ್ಲಿಸಲು ಆಗಮಿಸಿದಾಗ  ಬಿಜೆಪಿಯ ಗೂಂಡಾಗಳು ಕಪ್ಪು ಕೋಟ್‌ನಲ್ಲಿ ಅದಾಗಲೇ ಹಾಜರಿದ್ದರು. ಅವರು ನನ್ನ ಹಾಗೂ  ಅಭ್ಯರ್ಥಿಯನ್ನು ನಿಂದಿಸಿದರು. ನಮ್ಮಿಬ್ಬರನ್ನೂ ಕೊಲ್ಲುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿದ್ದರು. ಹಣದುಬ್ಬರ, ನಿರುದ್ಯೋಗ, ಶಿಕ್ಷಣ, ಆರೋಗ್ಯ, ವಿದ್ಯುತ್ ಮುಂತಾದ ವಿಷಯಗಳಲ್ಲಿ ಎಸ್‌ಪಿ ಮೈತ್ರಿಕೂಟಕ್ಕೆ ಮತ ಹಾಕುವ ಮೂಲಕ ಜನರು ಬಿಜೆಪಿಯನ್ನು ಪ್ರತಿ ಹಳ್ಳಿಯಿಂದ ಓಡಿಸುತ್ತಿರುವುದರಿಂದ ಅವರು ಈ ರೀತಿ ಮಾಡುತ್ತಿದ್ದಾರೆ. ಅಂತಹ ಗೂಂಡಾಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಾನು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ'' ಎಂದು ರಾಜ್ ಭರ್ India Today ಗೆ  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News