'ಎರಡನೇ ಕಿಮ್ ಜಾಂಗ್' ಬೇಕೇ ಎಂದು ಮತದಾರರು ನಿರ್ಧರಿಸಬೇಕು: ರಾಕೇಶ್ ಟಿಕಾಯತ್

Update: 2022-02-15 11:01 GMT

ಲಖಿಂಪುರ: ಉತ್ತರ ಪ್ರದೇಶದ ಚುನಾವಣೆಯ ಮಧ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ರೈತ ನಾಯಕ ರಾಕೇಶ್ ಟಿಕಾಯತ್ ಅವರು ಇಂದು ಉತ್ತರ ಕೊರಿಯಾವನ್ನು ಉಲ್ಲೇಖಿಸಿದ್ದಾರೆ. ಮತದಾರರು "ಎರಡನೇ ಕಿಮ್ ಜಾಂಗ್ ಉನ್" ಬೇಕೇ ಎಂದು ನಿರ್ಧರಿಸಬೇಕು ಎಂದು ಹೇಳಿದ್ದಾರೆ.

"ಜನಸಾಮಾನ್ಯರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಹಾಗೂ ಪ್ರಧಾನಿ ಬೇಕೇ ಅಥವಾ ಅವರಿಗೆ ಉತ್ತರ ಕೊರಿಯಾದ ಎರಡನೇ ಕಿಮ್ ಜಾಂಗ್‌ನಂತಹ ಸರ್ವಾಧಿಕಾರಿ ಬೇಕೇ ಎಂಬುದನ್ನು ಜನರು ನಿರ್ಧರಿಸಬೇಕು. ನಮಗೆ ಯಾವುದೇ ರಾಜ್ಯದಲ್ಲಿ ಸರ್ವಾಧಿಕಾರಿ ಸರಕಾರ ಬೇಡ. ಜನರು ತಮ್ಮ ಮತಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲು ನಾವು ಮನವಿ ಮಾಡಲು ಬಯಸುತ್ತೇವೆ'' ಎಂದು ಟಿಕಾಯತ್ ಹೇಳಿದರು.

ರೈತ ನಾಯಕ ಚುನಾವಣಾ ಕಾಲದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

ತಮ್ಮ ತವರೂರು ಮುಝಾಫರ್‌ನಗರದಲ್ಲಿ ಬಿಜೆಪಿ ಧ್ರುವೀಕರಣ ಪ್ರಚಾರವನ್ನು ನಡೆಸುತ್ತಿದೆ ಎಂದು ಕಳೆದ ವಾರ ಟಿಕಾಯತ್ ಆರೋಪಿಸಿದ್ದರು ಮತ್ತು ಇದು ಹಿಂದೂ-ಮುಸ್ಲಿಂ ಮೆರವಣಿಗೆಗಳ ಕ್ರೀಡಾಂಗಣವಲ್ಲ ಎಂದು ಹೇಳಿದ್ದರು.

"ಪಶ್ಚಿಮ ಉತ್ತರ ಪ್ರದೇಶವು ಅಭಿವೃದ್ಧಿಯ ಬಗ್ಗೆ ಮಾತನಾಡಲು ಬಯಸುತ್ತದೆ. ಹಿಂದೂ, ಮುಸ್ಲಿಂ, ಜಿನ್ನಾ, ಧರ್ಮದ ಬಗ್ಗೆ ಮಾತನಾಡುವವರು ಮತಗಳನ್ನು ಕಳೆದುಕೊಳ್ಳುತ್ತಾರೆ. ಮುಝಫರ್‌ನಗರ ಹಿಂದೂ-ಮುಸ್ಲಿಂ ಪಂದ್ಯಗಳ ಕ್ರೀಡಾಂಗಣವಲ್ಲ" ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.

"ಮತದಾರರು ರೈತರ ವಿರುದ್ಧ ಅಲ್ಲದವರಿಗೆ ಒಲವು ತೋರುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಹಿಂದೂ ಮತ್ತು ಮುಸ್ಲಿಂ ಮತದಾರರನ್ನು ಧ್ರುವೀಕರಿಸದವರಿಗೆ ಬೆಂಬಲ ನೀಡುತ್ತಾರೆ. ಜನರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವವರನ್ನು ಬೆಂಬಲಿಸುತ್ತಾರೆ" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News