ಕಸ್ಗಂಜ್ ಕಸ್ಟಡಿ ಸಾವು ಪ್ರಕರಣ : ಮೃತದೇಹ ಹೊರತೆಗೆದು ಎರಡನೇ ಪೋಸ್ಟ್ ಮಾರ್ಟಂಗೆ ಸೂಚಿಸಿದ ನ್ಯಾಯಾಲಯ
ಲಕ್ನೋ: ಯುವತಿಯೊಬ್ಬಳ ನಾಪತ್ತೆ, ಶಂಕಿತ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆಂದು ಕಳೆದ ವರ್ಷದ ನವೆಂಬರ್ 9ರಂದು ಠಾಣೆಗೆ ಕರೆಸಿದ್ದ ದಿನಗೂಲಿ ಕಾರ್ಮಿಕ, 22 ವರ್ಷದ ಮೊಹಮ್ಮದ್ ಅಲ್ತಾಫ್ ನಂತರ ಕಸ್ಗಂಜ್ ಜಿಲ್ಲೆಯ ಪೊಲೀಸ್ ಕಸ್ಟಡಿಯಲ್ಲಿರುವಾಗ ಠಾಣೆಯಲ್ಲಿ ಶಂಕಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿತ್ತು.
ಆತ ತನ್ನ ಜಾಕೆಟ್‍ನ ಟೋಪಿಯಲ್ಲಿನ ಹಗ್ಗವನ್ನು ಬಳಸಿ ಶೌಚಾಲಯದ ನೀರಿನ ನಳ್ಳಿಗೆ ಅದನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಪೊಲೀಸರು ಹೇಳಿದ್ದರೂ ಆತನ ಕುಟುಂಬ ಸಾವಿನ ಕಾರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾರಣ ಅಲಹಾಬಾದ್ ಹೈಕೋರ್ಟ್ ಆತನ ಮೃತದೇಹವನ್ನು ಹೊರತೆಗೆದು ರಾಜಧಾನಿಯ ಏಮ್ಸ್ ಗೆ ಎರಡನೇ ಪೋಸ್ಟ್ ಮಾರ್ಟಂಗೆ ಕಳುಹಿಸಲು ಆದೇಶಿಸಿದೆ. ಮೊದಲನೇ ಪೋಸ್ಟ್ ಮಾರ್ಟಂ ವರದಿಯಲ್ಲಿ ನೀಡಿದ ಮಾಹಿತಿಯಿಂದ ಅಲ್ತಾಫ್ ಕುಟುಂಬಕ್ಕೆ ಸಮಾಧಾನ ಉಂಟು ಮಾಡದ ಹಿನ್ನೆಲೆಯಲ್ಲಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿತ್ತು.
ಆತ ನೇಣು ಬಿಗಿದುಕೊಳ್ಳಲು ಬಳಸಿದ್ದಾನೆಂದು ಹೇಳಲಾದ ನಳ್ಳಿ ನೆಲದಿಂದ ಕೇವಲ ಮೂರು ಅಡಿ ಎತ್ತರದಲ್ಲಿರುವುದರಿಂದ, ಈ ಬಗ್ಗೆ ಸಂಶಯ ಮೂಡುವುದರಿಂದ ನ್ಯಾಯಾಲಯ ಎರಡನೇ ಪೋಸ್ಟ್ ಮಾರ್ಟಂಗೆ ಸೂಚಿಸಿದೆ.
ಅಲ್ತಾಫ್ ನೇಣು ಬಿಗಿದಿದ್ದನೆಂದು ಪೊಲೀಸರು ಹೇಳಿದ್ದ ನಳ್ಳಿಯ ಚಿತ್ರ (PHOTO: Indianexpress.com)
ಆತನ ತೂಕ ಸುಮಾರು 60 ಕೆಜಿಯಷ್ಟಾಗಿತ್ತು ಎಂದೂ ಆತನ ಕುಟುಂಬ ಹೇಳಿದೆ.
ಪ್ರಸ್ತುತ ನ್ಯಾಯಾಂಗ ತನಿಖೆ ನಡೆಯುತ್ತಿದ್ದು 35 ಸಾಕ್ಷಿಗಳ ಪೈಕಿ 7 ಮಂದಿಯ ವಿಚಾರಣೆ ನಡೆದಿದೆ.
19 ವರ್ಷದ ಯುವತಿಯೊಬ್ಬಳ ಅಪಹರಣ ಪ್ರಕರಣದಲ್ಲಿ ಅಲ್ತಾಫ್ ಶಾಮೀಲಾಗಿದ್ದಾನೆಂದು ಪೊಲೀಸರ ಆರೋಪವಾಗಿದೆ. ಆತನ ಸಂಶಯಾಸ್ಪದ ಸಾವಿಗೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಹಿತ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.