ಮತಾಂತರ ನಿಷೇಧ ಕಾನೂನು: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿರುವ ಗುಜರಾತ್ ಸರಕಾರದ ಅರ್ಜಿ ಕುರಿತು ಸುಪ್ರೀಂ ನೋಟಿಸ್
ಹೊಸದಿಲ್ಲಿ,ಫೆ.15: ಗುಜರಾತ್ ಧಾರ್ಮಿಕ ಸ್ವಾತಂತ್ರ ಕಾಯ್ದೆ, 2003ರ ಕಲಂ 5ರ ಕಾರ್ಯಾಚರಣೆಗೆ ತಡೆ ನೀಡಿರುವ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗುಜರಾತ್ ಸರಕಾರವು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ನೋಟಿಸನ್ನು ಹೊರಡಿಸಿದೆ. ಇನ್ನೋರ್ವ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಿಸುವ ವ್ಯಕ್ತಿಯು ಜಿಲ್ಲಾಧಿಕಾರಿಗಳ ಅನುಮತಿಯನ್ನು ಕೋರುವುದನ್ನು ಮತ್ತು ಮತಾಂತರಗೊಂಡ ವ್ಯಕ್ತಿಯು ಅದನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುವುದನ್ನು ಈ ಕಲಂ ಕಡ್ಡಾಯಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಝೀರ್ ಮತ್ತು ಕೃಷ್ಣ ಮುರಾರಿ ಅವರ ಪೀಠವು ಈ ನೋಟಿಸನ್ನು ಹೊರಡಿಸಿದೆ.
ಗುಜರಾತ್ ಉಚ್ಚ ನ್ಯಾಯಾಲಯವು ಕಳೆದ ವರ್ಷದ ಆಗಸ್ಟ್‌ನಲ್ಲಿ ಅಂತರ್ಧರ್ಮೀಯ ಮದುವೆಗಳು ಬಲವಂತದ ಮತಾಂತರಕ್ಕೆ ಸಾಧನಗಳಾಗಿವೆ ಎಂದು ಹೇಳಲಾಗಿರುವ ನಿಬಂಧನೆ ಸೇರಿದಂತೆ ಧಾರ್ಮಿಕ ಸ್ವಾತಂತ್ರ (ತಿದ್ದುಪಡಿ) ಕಾಯ್ದೆ,2021ರ ಹಲವಾರು ಕಲಮ್‌ಗಳ ಕಾರ್ಯಾಚರಣೆಗೆ ತಡೆಯನ್ನು ನೀಡಿತ್ತು.
ಯಾವುದೇ ವ್ಯಕ್ತಿಯು ಇನ್ನೋರ್ವ ವ್ಯಕ್ತಿಯನ್ನು ತನ್ನ ಸ್ವಂತ ಧರ್ಮಕ್ಕೆ ಮತಾಂತರಿಸುವ ಮೂಲಭೂತ ಹಕ್ಕನ್ನು ಹೊಂದಿಲ್ಲ, ಏಕೆಂದರೆ ವ್ಯಕ್ತಿಯೋರ್ವ ತನ್ನ ಧರ್ಮದ ತತ್ವಗಳ ಸಂವಹನ ಅಥವಾ ಪ್ರಸಾರದ ಪ್ರಯತ್ನವಾಗಿ ಉದ್ದೇಶಪೂರ್ವಕವಾಗಿ ಇನ್ನೋರ್ವ ವ್ಯಕ್ತಿಯನ್ನು ಮತಾಂತರಗೊಳಿಸಿದರೆ ಅದು ದೇಶದ ಎಲ್ಲ ಪ್ರಜೆಗಳಿಗೆ ಸಮಾನವಾಗಿ ಖಾತರಿಪಡಿಸಲಾಗಿರುವ ಆತ್ಮಸಾಕ್ಷಿಯ ಸ್ವಾತಂತ್ರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹಿಂದೆ ತೀರ್ಪು ನೀಡಿದೆ ಎಂದು ತನ್ನ ಮೇಲ್ಮನವಿಯಲ್ಲಿ ಹೇಳಿರುವ ಗುಜರಾತ್ ಸರಕಾರವು, ಹೀಗಾಗಿ ಕಾಯ್ದೆಯ ಕಲಂ 5(1)ರಡಿ ಹೇಳಿರುವಂತೆ ಇನ್ನೋರ್ವ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಿಸಲು ಜಿಲ್ಲಾಧಿಕಾರಿಯ ಪೂರ್ವಾನುಮತಿಯನ್ನು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ ನಿಬಂಧನೆಯು ಯಾವುದೇ ಮೂಲಭೂತ ಹಕ್ಕುಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಮತಾಂತರಗೊಳ್ಳುವ ವ್ಯಕ್ತಿಗೆ ಸಂಬಂಧಿಸಿದಂತೆ ಆತ ಮತಾಂತರಗೊಂಡ ಬಳಿಕ ಸಂಬಂಧಿತ ಅಧಿಕಾರಿಗಳಿಗೆ ತಿಳಿಸುವುದು ಮಾತ್ರ ಅಗತ್ಯವಾಗಿರುತ್ತದೆ. ಹೀಗಾಗಿ ಕಾಯ್ದೆಯ ಕಲಂ 5(2) ಸಹ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಹಕ್ಕಿಗೆ ಅಡ್ಡಿಯಾಗುವುದಿಲ್ಲ ಎಂದು ವಾದಿಸಿದೆ.
ಒಡಿಶಾ ಧಾರ್ಮಿಕ ಸ್ವಾತಂತ್ರ ಕಾಯ್ದೆ,1967ರಡಿ ರೂಪಿಸಲಾಗಿದ್ದ ಒಡಿಶಾ ಧಾರ್ಮಿಕ ಸ್ವಾತಂತ್ರ ನಿಯಮಗಳು,1989ರಲ್ಲಿ ಮತಾಂತರಕ್ಕೆ ವಿಧಿಸಲಾಗಿದ್ದ ಕೆಲವು ಪೂರ್ವಷರತ್ತುಗಳನ್ನು ಎತ್ತಿಹಿಡಿಯುವಾಗ ಸರ್ವೋಚ್ಚ ನ್ಯಾಯಾಲಯವು ರೂಪಿಸಿದ್ದ ಕಾನೂನನ್ನು ಗೌರವಿಸದೆ ಗುಜರಾತ ಉಚ್ಚ ನ್ಯಾಯಾಲಯವು ತಪ್ಪು ಮಾಡಿದೆ ಎಂದು ರಾಜ್ಯ ಸರಕಾರವು ಹೇಳಿದೆ.