ಉಕ್ರೇನ್ ಮೇಲೆ ರಷ್ಯಾ ದಾಳಿ ಸಾಧ್ಯತೆ ಇನ್ನೂ ಇದೆ: ಅಮೆರಿಕ ಅಧ್ಯಕ್ಷ ಬೈಡನ್

Update: 2022-02-16 03:36 GMT
ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್: ಯುದ್ಧದ ಅಂಚಿನಿಂದ ಹಿಂದೆ ಸರಿಯುವಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ರಷ್ಯಾವನ್ನು ಅಗ್ರಹಿಸಿದ್ದಾರೆ. ರಷ್ಯಾ, ಕೆಲ ಪಡೆಯನ್ನು ಉಕ್ರೇನ್ ಗಡಿಯಿಂದ ಹಿಂದಕ್ಕೆ ಪಡೆದಿರುವುದು ಇನ್ನೂ ದೃಢಪಟ್ಟಿಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

"ರಷ್ಯಾದ ನಾಗರಿಕರಿಗೆ: ನಾವು ನಿಮ್ಮ ವಿರೋಧಿಗಳಲ್ಲ. ಉಕ್ರೇನ್ ವಿರುದ್ಧ ರಕ್ತಪಾತಕ್ಕೆ ಕಾರಣವಾಗುವ, ವಿನಾಶಕಾರಿ ಯುದ್ಧವನ್ನು ನೀವು ಬಯಸುತ್ತೀರಿ ಎಂದು ನಾವು ನಂಬುವುದಿಲ್ಲ" ಎಂದು ಶ್ವೇತಭವನದಲ್ಲಿ ಮಾತನಾಡಿದ ಅವರು ಹೇಳಿದರು. 

ರಷ್ಯಾದ ಜತೆ ನೇರ ಸಂಘರ್ಷವನ್ನು ಅಮೆರಿಕ ಬಯಸುವುದಿಲ್ಲ. ಅದರೆ ಉಕ್ರೇನ್‍ನಲ್ಲಿರುವ ಅಮೆರಿಕನ್ನರ ಮೇಲೆ ದಾಳಿ ನಡೆಸಿದರೆ, ನಾವು ಬಲವಂತವಾಗಿ ಸ್ಪಂದಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಏನೇ ಸಂಭವಿಸಿದರೂ ಅದಕ್ಕೆ ಅಮೆರಿಕ ಮತ್ತು ನ್ಯಾಟೊ ಮಿತ್ರದೇಶಗಳು ಸಜ್ಜಾಗಿವೆ. ಮಾಸ್ಕೊ ದಾಳಿ ನಡೆಸಿದರೆ ಅದಕ್ಕೆ ತೀವ್ರ ಆರ್ಥಿಕ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ಉಕ್ರೇನ್‍ನ ಮೇಲೆ ರಷ್ಯಾ ದಾಳಿ ನಡೆಯುವ ಸಾಧ್ಯತೆ ಇನ್ನೂ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News