ಪಂಜಾಬ್, ಉತ್ತರ ಪ್ರದೇಶದಲ್ಲಿ ಕನಿಷ್ಠ ಎರಡು ಡಝನ್ ಬಿಜೆಪಿ ನಾಯಕರಿಗೆ ಕೇಂದ್ರದಿಂದ ಭದ್ರತೆ
ಹೊಸದಿಲ್ಲಿ: ಕೇಂದ್ರ ಸರಕಾರವು ಪ್ಯಾರಾಮಿಲಿಟರಿ ಕಮಾಂಡೋಗಳ ವಿಐಪಿ ಭದ್ರತೆಯನ್ನು ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಸುಮಾರು ಎರಡು ಡಜನ್ ಬಿಜೆಪಿ ನಾಯಕರಿಗೆ ಒದಗಿಸಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಎಸ್ ಪಿ ಎಸ್ ಬಾಘೇಲ್ ಅವರಿಗೂ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಈ ಭದ್ರತೆ ಮುಂದುವರಿಯಲಿದೆ. ಇದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಸಿಐಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯ ಸೇವೆಗಳನ್ನು ಬಳಸುತ್ತಿದೆ. ಎರಡೂ ಪಡೆಗಳ ಬಳಿ ಕಮಾಂಡೋಗಳನ್ನು ಹೊಂದಿರುವ ವಿಶೇಷ ವಿಐಪಿ ಭದ್ರತಾ ಘಟಕಗಳಿವೆ.
ಕೆಲ ಬಿಜೆಪಿ ನಾಯಕರಿಗೆ ರಾಜ್ಯ ಪೊಲೀಸ್ ಭದ್ರತೆಗೆ ಹೆಚ್ಚುವರಿಯಾಗಿ ಕೇಂದ್ರ ಸರಕಾರ ಒದಗಿಸುವ ಭದ್ರತೆಯೂ ಇರಲಿದೆ. ಬಾಘೇಲ್ ಹೊರತಾಗಿ ಭದ್ರತೆ ಪಡೆದಿರುವ ಇತರರಲ್ಲಿ ದಿಲ್ಲಿಯ ಬಿಜೆಪಿ ಸಂಸದ ಹಾಗೂ ಗಾಯಕ ಹಂಸ್ ರಾಜ್ ಹಂಸ್ ಸೇರಿದ್ದಾರೆ.
ಉತ್ತರ ಪ್ರದೇಶದ ಭದೋಹಿ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಚಂದ್ ಬಿಂದ್ ಅವರಿಗೂ ಸಿಐಎಸ್‌ಎಫ್ ಮುಖಾಂತರ ಎಕ್ಸ್ ಕೆಟಗರಿ ಭದ್ರತೆ ಒದಗಿಸಲಾಗಿದೆ.
ಪಂಜಾಬ್‌ಬಲ್ಲಿ ಶಿರೋಮಣಿ ಅಕಾಲಿ ದಳ್‌ನ ಸುಖ್ವಿಂದರ್ ಸಿಂಗ್ ಬಿಂದ್ರಾ, ಬಿಜೆಪಿ ಅಭ್ಯರ್ಥಿ ಪರಮಿಂದರ್ ಸಿಂಗ್ ಧಿಂಡ್ಸ ಮತ್ತು ಅವತಾರ್ ಸಿಂಗ್ ಝಿರಾ ಅವರಿಗೂ ಭದ್ರತೆ ಒದಗಿಸಲಾಗಿದೆ.