×
Ad

ಮಹಿಳೆಯರು ಮಕ್ಕಳೆನ್ನದೆ ಲಾಠಿ ಚಾರ್ಜ್: ಉತ್ತರ ಪ್ರದೇಶ ಪೊಲೀಸರ ಕ್ರೌರ್ಯ ಸಾಮಾಜಿಕ ತಾಣದಲ್ಲಿ ವೈರಲ್

Update: 2022-02-16 21:45 IST

ಗಾಜಿಯಾಬಾದ್: ಕರ್ನಾಟಕದಲ್ಲಿ ಹಿಜಾಬ್ ನಿಷೇಧದ ವಿರುದ್ಧ ಉತ್ತರಪ್ರದೇಶದ ಖೋಡಾ ಕಾಲೋನಿಯಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರ ವಿರುದ್ಧ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಪೊಲೀಸರು ಪ್ರತಿಭಟನಾಕಾರ ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. 

ಮಹಿಳೆಯರ ಮೇಲೆ ಲಾಠಿ ಚಾರ್ಜ್‌ ಮಾಡುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಸ್ಪಷ್ಟನೆ ನೀಡಿದ ಪೊಲೀಸರು ಪ್ರತಿಭಟನಾಕಾರರು ಮೊದಲು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾಗಿ indianexpress.com ವರದಿ ಮಾಡಿದೆ.

ಭಾನುವಾರ ಮಧ್ಯಾಹ್ನ, ಮಹಿಳೆಯರ ಗುಂಪೊಂದು ಹಿಜಾಬ್‌ ಮೇಲೆ ಹೇರಿರುವ ನಿರ್ಬಂಧಗಳ ವಿರುದ್ಧ ಪ್ರತಿಭಟನೆ ನಡೆಸಿತು. ಶಾಲೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಮಕ್ಕಳ ಹಕ್ಕನ್ನು ಅಧಿಕಾರಿಗಳು ಕಸಿಯಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. 

ಬಳಿಕ ಸ್ಥಳಕ್ಕಾಗಮಿಸಿದ್ದ ಪೊಲೀಸರು ಮಹಿಳೆಯರನ್ನು ಅಲ್ಲಿಂದ ಲಾಠಿ ಚಾರ್ಜ್‌ ಮಾಡಿ ಚದುರಿಸುವ ವಿಡಿಯೋ ಈಗ ವೈರಲ್‌ ಗೊಂಡಿದೆ. 

ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಆದರೆ, ವೈರಲ್‌ ಆಗುತ್ತಿರುವ ವಿಡಿಯೋ ಮೇಲ್ನೋಟಕ್ಕೆ ಪೊಲೀಸರ ಕ್ರಮದ ಮೇಲೆ ಸಂದೇಹ ಉಂಟು ಮಾಡುವಂತಿದೆ.  ಹತ್ತರಿಂದ ಹದಿನೈದು ಮಂದಿಯಷ್ಟು ಇರುವ ಮಹಿಳೆಯರ ಗುಂಪು ರಸ್ತೆ ಬದಿಯಲ್ಲಿ ಪ್ರತಿಭಟನೆ ಮಾಡುವುದು ಕಂಡು ಬರುತ್ತದೆ. ಅಲ್ಲಿಗೆ ಏಕಾಏಕಿ ಬಂದ ಪೊಲೀಸರು ಲಾಠಿ ಬೀಸುವುದು ಕಂಡು ಬರುತ್ತದೆ. ಲಾಠಿ ಬೀಸುವ ಮೊದಲು ಪ್ರತಿಭಟನಾಕಾರರೊಂದಿಗೆ ಮಾತನಾಡುವುದಾಗಲಿ, ಅಥವಾ ತೆರಳುವಂತೆ ಸೂಚಿಸುವುದಾಗಲಿ ಕಂಡು ಬರುವುದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News