ಉಕ್ರೇನ್ ಗಡಿ ಬಳಿ ಸೇನಾ ಕವಾಯತು ಅಂತ್ಯ; ಸೇನೆ ಮೂಲನೆಲೆಗೆ ವಾಪಾಸು: ರಶ್ಯಾ ಘೋಷಣೆ
ಮಾಸ್ಕೋ, ಫೆ.16: ರಶ್ಯಾದ ಸ್ವಾಧೀನದಲ್ಲಿರುವ ಕ್ರಿಮಿಯಾದಲ್ಲಿ ಆಯೋಜಿಸಲಾಗಿದ್ದ ಸೇನಾ ಕವಾಯತು ಅಂತ್ಯಗೊಂಡಿದ್ದು ಪಡೆಗಳು ಮೂಲನೆಲೆಗೆ ವಾಪಾಸಾಗುತ್ತಿವೆ ಎಂದು ರಶ್ಯಾ ಬುಧವಾರ ಘೋಷಿಸಿದೆ.
ದಕ್ಷಿಣ ಸೇನಾನೆಲೆಯ ತುಕಡಿಗಳು ಸಮರತಂತ್ರದ ಕವಾಯತಿನಲ್ಲಿ ಪಾಲ್ಗೊಂಡ ಬಳಿಕ ತಮ್ಮ ಕಾಯಂ ನಿಯೋಜನೆಯ ಸ್ಥಳಕ್ಕೆ ಮರಳುತ್ತಿದ್ದಾರೆ . ಟ್ಯಾಂಕ್‌ಗಳು, ಫಿರಂಗಿ ಹಾಗೂ ಕಾಲಾಳು ಪಡೆ ವಾಹನಗಳನ್ನು ರೈಲಿನ ಮೂಲಕ ಸಾಗಿಸಲಾಗುವುದು ಎಂದು ರಶ್ಯಾದ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ. ರಶ್ಯಾ ನಿಯಂತ್ರಿತ ಪ್ರದೇಶ ಮತ್ತು ರಶ್ಯಾವನ್ನು ಸಂಪರ್ಕಿಸುವ ಸೇತುವೆಯನ್ನು ಸೇನಾ ತುಕಡಿ ದಾಟುತ್ತಿರುವ ಚಿತ್ರಗಳನ್ನು ರಶ್ಯಾದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಪ್ರಸಾರ ಮಾಡಿದೆ.
ಆದರೆ ರಶ್ಯಾದ ಆಕ್ರಮಣ ಬೆದರಿಕೆ ಇನ್ನೂ ದೂರವಾಗಿಲ್ಲ ಎಂದು ಪಾಶ್ಚಿಮಾತ್ಯ ದೇಶಗಳ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ರಶ್ಯಾದ ಆಕ್ರಮಣದ ಸಾಧ್ಯತೆ ಇನ್ನೂ ಉಳಿದುಕೊಂಡಿದೆ . ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಜಮಾವಣೆಗೊಳಿಸಿರುವ ಲಕ್ಷಾಂತರ ಪಡೆಯಲ್ಲಿ ಯಾವುದೇ ತುಕಡಿ ವಾಪಸಾಗಿರುವುದನ್ನು ಇನ್ನಷ್ಟೇ ದೃಢಪಡಿಸಬೇಕಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಉಕ್ರೇನ್ ಸರಕಾರದ ವೆಬ್‌ಸೈಟ್ ಮೇಲೆ ಸೈಬರ್ ದಾಳಿ: ಮೂಲಗಳಿಂದ ಮಾಹಿತಿ
ಉಕ್ರೇನ್ ಸರಕಾರದ ರಕ್ಷಣಾ ಇಲಾಖೆ, ವಿದೇಶ ವ್ಯವಹಾರ ಇಲಾಖೆ, ಸಂಸ್ಕೃತಿ ಇಲಾಖೆ ಸಹಿತ ಕನಿಷ್ಟ 10 ಇಲಾಖೆಗಳ ಮತ್ತು 2 ಪ್ರಮುಖ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು ಫೆಬ್ರವರಿ 15ರಂದು ಸೈಬರ್‌ದಾಳಿಗೆ ಒಳಗಾಗಿರುವುದರಿಂದ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂದು ಮೂಲಗಳು ಹೇಳಿವೆ.
ಉಕ್ರೇನ್ ಗಡಿಭಾಗದಲ್ಲಿ ರಶ್ಯಾದ ಸೇನೆಯ ಜಮಾವಣೆಯಿಂದ ಕಳೆದ ಕೆಲ ದಿನಗಳಿಂದ ನೆಲೆಸಿದ್ದ ಉದ್ವಿಗ್ನತೆಯ ಮಧ್ಯೆಯೇ ಉಕ್ರೇನ್‌ನ ಸರಕಾರಿ ಇಲಾಖೆಗಳನ್ನು ಗುರಿಯಾಗಿಸಿ ಈ ಸೈಬರ್ ದಾಳಿ ನಡೆದಿದೆ. ಈ ಮಧ್ಯೆ, ಉಕ್ರೇನ್ ಗಡಿಭಾಗದಿಂದ ಕೆಲ ತುಕಡಿಗಳನ್ನು ವಾಪಾಸು ಕರೆಸಿಕೊಳ್ಳುತ್ತಿರುವುದಾಗಿ ರಶ್ಯಾ ಮಂಗಳವಾರ ಹೇಳಿಕೆ ನೀಡಿದೆ. ಆದರೆ ಇದಕ್ಕೆ ಸೂಕ್ತ ಪುರಾವೆ ಒದಗಿಸಬೇಕೆಂದು ಪಾಶ್ಚಿಮಾತ್ಯ ದೇಶಗಳು ಒತ್ತಾಯಿಸಿವೆ.
ಉಕ್ರೇನ್‌ನ ಸರಕಾರಿ ಸ್ವಾಮ್ಯದ 2 ಬೃಹತ್ ಬ್ಯಾಂಕ್‌ಗಳಾದ ಪ್ರೈವಟ್‌ಬ್ಯಾಂಕ್ ಹಾಗೂ ಎಸ್‌ಬರ್ ಬ್ಯಾಂಕ್‌ಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದರಿಂದ ಗ್ರಾಹಕರಿಗೆ ಬ್ಯಾಂಕ್‌ನ ಆ್ಯಪ್ ಬಳಸಲು ಹಾಗೂ ಆನ್‌ಲೈನ್ ಪಾವತಿಗೆ ತೊಡಕಾಗಿದೆ ಎಂದು ವರದಿಯಾಗಿದೆ. ಆದರೆ ಗ್ರಾಹಕರ ಖಾತೆಯಲ್ಲಿನ ಹಣ ಸುರಕ್ಷಿತವಾಗಿದೆ ಎಂದು ಉಕ್ರೇನ್‌ನ ಮಾಹಿತಿ ಸಚಿವಾಲಯ ಹೇಳಿಕೆ ನೀಡಿದೆ. ಸೈಬರ್ ದಾಳಿಯ ಹಿಂದೆ ರಶ್ಯಾದ ಪಾತ್ರ ಇರಬಹುದು ಎಂದು ಮಾಹಿತಿ ಇಲಾಖೆಯ ಉಪಸಚಿವ ವಿಕ್ಟರ್ ಝೊರಾ ಹೇಳಿದ್ದಾರೆ.
ಆಕ್ರಮಣಕಾರಿ ಯೋಜನೆ ಕಾರ್ಯನಿರ್ವಹಿಸದ ಕಾರಣ ಆಕ್ರಮಣಕಾರರು ಸಣ್ಣಮಟ್ಟಿನ ಕಿಡಿಗೇಡಿ ತಂತ್ರಗಳನ್ನು ಬಳಸಿರುವ ಸಾಧ್ಯತೆಯಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
’ಜನವರಿ ಮಧ್ಯಭಾಗದಲ್ಲಿ ಉಕ್ರೇನ್ ಸರಕಾರದ ಸುಮಾರು 70 ವೆಬ್‌ಸೈಟ್‌ಗಳ ಮೇಲೆ ಏಕಕಾಲಕ್ಕೆ ಸೈಬರ್ ದಾಳಿ ನಡೆದಿದ್ದು ಕೆಲ ಸಮಯ ಈ ವೆಬ್‌ಸೈಟ್‌ಗಳು ಸ್ಥಗಿತಗೊಂಡಿದ್ದವು. ಭಯಪಡಿರಿ ಮತ್ತು ಇನ್ನಷ್ಟು ಕೆಟ್ಟದ್ದನ್ನು ನಿರೀಕ್ಷಿಸಿ ಎಂದು ಈ ಸಂದರ್ಭ ಹ್ಯಾಕರ್‌ಗಳು ಉಕ್ರೇನ್ ಜನರನ್ನುದ್ದೇಶಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. 2017ರಲ್ಲಿ ರಶ್ಯಾವು ನಾಟ್‌ಪೆಟ್ಯಾ ವೈರಸ್ ಮೂಲಕ ಉಕ್ರೇನ್ ಮೇಲೆ ಅತ್ಯಂತ ವಿನಾಶಕಾರಿ ಸೈಬರ್ ದಾಳಿ ನಡೆಸಿದ್ದು ಇದರಿಂದ ವಿಶ್ವದಾದ್ಯಂತ 10 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟ ಸಂಭವಿಸಿತ್ತು.
ಉಕ್ರೇನ್ ಮೇಲೆ ಆಕ್ರಮಣ ನಡೆಸಲು ರಶ್ಯಾ ಸಿದ್ಧತೆ ನಡೆಸಿದೆ ಮತ್ತು ಸೈಬರ್‌ಸುರಕ್ಷತೆ ಅತೀ ಹೆಚ್ಚಿನ ಆತಂಕದ ವಿಷಯವಾಗಿದೆ ಎಂದು ಅಮೆರಿಕ ಹಲವು ಬಾರಿ ಆರೋಪಿಸಿದೆ.