×
Ad

ಕಾಂಡಕೋಶ ಕಸಿಯ ಬಳಿಕ ಎಚ್‌ಐವಿ ರೋಗದಿಂದ ಚೇತರಿಸಿಕೊಂಡ ಮಹಿಳೆ

Update: 2022-02-16 23:56 IST
SOURCE : PTI

ಚಿಕಾಗೊ, ಫೆ.16: ದಾನಿಯೊಬ್ಬರಿಂದ ಪಡೆದ ಕಾಂಡಕೋಶದ ಕಸಿ ಮೂಲಕ ಏಡ್ಸ್ ರೋಗದಿಂದ ಮತ್ತು ಲ್ಯುಕೆಮಿಯಾ ರೋಗದಿಂದ ಚೇತರಿಸಿಕೊಂಡ ಪ್ರಥಮ ಮಹಿಳೆಯಾಗಿ ಅಮೆರಿಕದ 64 ವರ್ಷದ ಮಹಿಳೆ ಗುರುತಿಸಿಕೊಂಡಿದ್ದಾರೆ ಎಂದು ಸಂಶೋಧಕರ ತಂಡ ಮಂಗಳವಾರ ವರದಿ ಮಾಡಿದೆ.

ಹೊಕ್ಕುಳ ಬಳ್ಳಿಯ ರಕ್ತ ಎಂಬ ನೂತನ ಚಿಕಿತ್ಸಾ ವಿಧಾನದ ಮೂಲಕ ಈ ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು ಇದು ಯಶಸ್ವಿಯಾಗಿದೆ. ಇದರಿಂದ ಹೆಚ್ಚಿನ ರೋಗಿಗಳು ಚಿಕಿತ್ಸೆ ಪಡೆದು ಬದುಕುಳಿಯುವ ಆಶಾವಾದ ಚಿಗುರಿದೆ ಎಂದು ರೆಟ್ರೊವೈರಸ್ ಆ್ಯಂಡ್ ಅಪೊರ್ಚುನಿಸ್ಟಿಕ್ ಇನ್‌ಫೆಕ್ಷನ್ಸ್ ಎಂಬ ವಿಷಯದಲ್ಲಿ ಅಮೆರಿಕದ ಡೆನ್ವರ್ ನಗರದಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಾಹಿತಿ ನೀಡಲಾಗಿದೆ.
 
ಮೂಳೆ ಮಜ್ಜೆಯಲ್ಲಿ ರಕ್ತರೂಪಿಸುವ ಜೀವಕಣದಲ್ಲಿ ಆರಂಭವಾಗುವ ಲ್ಯುಕೆಮಿಯಾ ಎಂಬ ಕ್ಯಾನ್ಸರ್ ಅನ್ನು ಗುಣಪಡಿಸಲು ಹೊಕ್ಕುಳ ಬಳ್ಳಿಯ ರಕ್ತ ಚಿಕಿತ್ಸಾ ವಿಧಾನವನ್ನು ಅನುಸರಿಸಿದ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದು 14 ತಿಂಗಳವರೆಗೆ ಎಚ್‌ಐವಿ ವೈರಸ್‌ನಿಂದ ಮುಕ್ತವಾಗಿರುತ್ತಾರೆ. ಈ ಹಿಂದೆ ಇದೇ ರೀತಿಯ ಚಿಕಿತ್ಸಾ ಕ್ರಮವನ್ನು ಇಬ್ಬರು ಪುರುಷರಿಗೆ ಅನ್ವಯಿಸಲಾಗಿತ್ತು. ಮಹಿಳೆಯ ಮೇಲೆ ಯಶಸ್ವಿಯಾಗಿ ನಡೆದ ಪ್ರಥಮ ಚಿಕಿತ್ಸೆ ಇದಾಗಿದೆ ಎಂದು ಅಂತರಾಷ್ಟ್ರೀಯ ಏಯ್ಡ್ಸ್ ಸಂಸ್ಥೆಯ ಚುನಾಯಿತ ಅಧ್ಯಕ್ಷೆ ಶಾರೊನ್ ಲೆವಿನ್ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ವಿವಿಯ ಡಾ. ಯುವೋನಿ ಬ್ರೈಸನ್ ಮತ್ತು ಜಾನ್ಸ್ ಹಾಪ್ಕಿನ್ಸ್ ವಿವಿಯ ಡಾ. ಡೆಬೋರ ಪೆರ್ಸಾದ್ ನೇತೃತ್ವದ ಅಧ್ಯಯನ ಕಾರ್ಯದ ಮುಂದುವರಿದ ಭಾಗ ಇದಾಗಿದೆ. ಎಚ್‌ಐವಿ ಪೀಡಿತ 25 ರೋಗಿಗಳಿಗೆ ಈ ಚಿಕಿತ್ಸಾ ವಿಧಾನ ಅನುಸರಿಸುವ ಉದ್ದೇಶವಿದೆ. ಕ್ಯಾನ್ಸರ್ ವೈರಸ್ ಅನ್ನು ಕೊಲ್ಲಲು ಆರಂಭದ ಹಂತದಲ್ಲಿ ಕಿಮಿಯೋಥೆರಪಿ ವಿಧಾನ ಬಳಸಲಾಗುವುದು. ಬಳಿಕ ಸೂಕ್ತ ವ್ಯಕ್ತಿಗಳಿಂದ ದೇಣಿಗೆ ಪಡೆದ ಕಾಂಡಕೋಶವನ್ನು ಕಸಿ ಮಾಡಲಾಗುವುದು ಎಂದು ವರದಿ ಹೇಳಿದೆ.

ಬಹುತೇಕ ಎಚ್‌ಐವಿ ಸೋಂಕು ಪೀಡಿತರಿಗೆ ಮೂಳೆ ಮಜ್ಜು ಕಸಿ ಶಸ್ತ್ರಚಿಕಿತ್ಸೆ ವಿಧಾನ ಕಾರ್ಯಸಾಧ್ಯವಲ್ಲ. ಆದರೆ ಜೀನ್ ಚಿಕಿತ್ಸೆಯಿಂದ ಎಚ್‌ಐವಿ ಗುಣಪಡಿಸಲು ಸಾಧ್ಯ ಎಂದು ಈ ವರದಿಯಿಂದ ದೃಢಪಟ್ಟಿದೆ ಎಂದು ಶಾರೊನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News