ಹಿಜಾಬ್‌ ಪ್ರಕರಣ: ತಮ್ಮ ದೇಶಕ್ಕೆ ಬಿಜೆಪಿ ಸದಸ್ಯರಿಗೆ ಪ್ರವೇಶ ನೀಡಬಾರದೆಂದು ಸರ್ಕಾರಕ್ಕೆ ಪತ್ರ ಬರೆದ ಕುವೈತ್‌ ಸಂಸದರು

Update: 2022-02-18 19:08 GMT
Photo: Twitter/@MJALSHRIKA

ಕುವೈತ್: ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದ ಬಗ್ಗೆ ನಡೆಯುತ್ತಿರುವ ವಿವಾದ ಉಲ್ಬಣಿಸುತ್ತಿದ್ದಂತೆ, ಭಾರತದ ಆಡಳಿತರೂಢ ಬಿಜೆಪಿಯ ಯಾವುದೇ ಸದಸ್ಯರು ಕುವೈತ್‌ಗೆ ಪ್ರವೇಶಿಸುವುದನ್ನು ನಿಷೇಧಿಸಬೇಕೆಂದು ಕುವೈತ್ ಸಂಸದ ಡಾ.ಸಲೇಹ್ ಟಿಎಚ್ ಅಲ್-ಮುತೈರಿ ಅವರು ಕುವೈತ್ ಸಂಸತ್ತಿಗೆ ಪತ್ರ  ಬರೆದಿದ್ದಾರೆ.

ಪತ್ರಕ್ಕೆ ಹಲವಾರು ಕುವೈತ್ ಸಂಸದರು ಸಹಿ ಮಾಡಿದ್ದಾರೆ. ಭಾರತದ ಆಡಳಿತ ಪಕ್ಷ ಬಿಜೆಪಿಯು ಭಾರತದಲ್ಲಿ ಮುಸ್ಲಿಮರ ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದು, ಬಿಜೆಪಿಯ ಯಾವುದೇ ಸದಸ್ಯರು ಕುವೈತ್‌ಗೆ ಪ್ರವೇಶಿಸುವುದನ್ನು ತಕ್ಷಣವೇ ನಿಷೇಧಿಸಬೇಕೆಂದು ಸಂಸದರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕುವೈತ್ ಸರ್ಕಾರವು ಭಾರತದಲ್ಲಿ ನಡೆಯುತ್ತಿರುವ ವಿದ್ಯಾಮಾನವನ್ನು ಗಂಭೀರವಾಗಿ ಗಮನಿಸಬೇಕು. ಭಾರತದಲ್ಲಿ ಮುಸ್ಲಿಮರ ವಿರುದ್ಧದ ದಬ್ಬಾಳಿಕೆ ಕೊನೆಗೊಳ್ಳದ ಹೊರತು ಬಿಜೆಪಿ ಸದಸ್ಯರಿಗೆ ಕುವೈತ್‌ ಪ್ರವೇಶ ನೀಡಕೂಡದು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಕರ್ನಾಟಕದಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದನ್ನು ನಿರ್ಬಂಧಿಸಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.  

ಕುವೈತ್ ಲಾಯರ್ಸ್ ಅಸೋಸಿಯೇಷನ್‌ನ ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಕೇಂದ್ರದ ನಿರ್ದೇಶಕಿ ಮತ್ತು ಕುವೈತ್ ಇನ್‌ಸ್ಟಿಟ್ಯೂಟ್ ಫಾರ್ ಪ್ರೊಟೆಕ್ಷನ್ ಮತ್ತು ಲೀಗಲ್ ಸ್ಟಡೀಸ್‌ನ ತರಬೇತಿ ಸಮಿತಿಯ ಸದಸ್ಯೆ ಮೆಜ್ಬೆಲ್‌ ಅಲ್‌ ಶ್ರೀಕಾ  ಅವರು ಸಂಸದರು ಬರೆದಿರುವ ಪತ್ರದ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ಕುವೈತ್‌ನ ಪ್ರಭಾವಿ ಸಂಸದರು ಕುವೈತ್‌ಗೆ ಬಿಜೆಪಿ ಸದಸ್ಯರ ಪ್ರವೇಶವನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಿರುಕುಳಗೊಳಗಾಗುತ್ತಿದ್ದರೆ ನಾವದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಇದು ಸಮುದಾಯ ಒಂದಾಗಬೇಕಾದ ಸಮಯ” ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.  
 
ಈ ಟ್ವೀಟನ್ನು ರಿಟ್ವೀಟ್‌ ಮಾಡಿರುವ ತಿರುವನಂತಪುರಂ ಸಂಸದ ಶಶಿ ತರೂರ್‌, ದೇಶೀಯ ಬೆಳವಣಿಗೆಗಳಿಂದ  ಅಂತರಾಷ್ಟ್ರೀಯ ಪರಿಣಾಮಗಲಾಗುತ್ತವೆ. ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿರುವ ಬಗ್ಗೆ ಹಾಗೂ ಅದರ ವಿರುದ್ಧ ಪ್ರಧಾನಿ ಮೋದಿ ನಿರ್ಣಾಯಕ ಕ್ರಮಗಳನ್ನು ತೆಗೆಯದ ಕುರಿತು ಗಲ್ಫ್‌ ರಾಷ್ಟ್ರಗಳ ಗೆಳೆಯರಿಂದ ನಾನು ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ʼನಾವು ಭಾರತವನ್ನು ಇಷ್ಟಪಡುತ್ತೇವೆ, ಆದರೆ, ನಾವು ನಿಮ್ಮ ಗೆಳೆಯರಾಗಲು ತೊಂದರೆಯಾಗುವಂತೆ ಮಾಡಬೇಡಿʼ ಎಂದು ಹೇಳಿರುವುದನ್ನು ತರೂರ್‌ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ತನ್ನ ಮಧ್ಯಂತರ ಆದೇಶವನ್ನು ತಪ್ಪಾಗಿ ಜಾರಿಗೊಳಿಸುತ್ತಿರುವ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News