ಹಿಜಾಬ್‌ ಕುರಿತು ಶಶಿ ತರೂರ್‌ ಮಾಡಿದ 'ರಿಟ್ವೀಟ್' ಗೆ ಕುವೈತ್‌ ಭಾರತೀಯ ದೂತವಾಸ ಟೀಕೆ

Update: 2022-02-19 07:12 GMT

ಹೊಸದಿಲ್ಲಿ: 'ಪಾಕಿಸ್ತಾನಿ ಏಜಂಟ್' ಎಂದು ಬಣ್ಣಿಸಲಾದ ವ್ಯಕ್ತಿಯೊಬ್ಬರ 'ದೇಶವಿರೋಧಿ' ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ ಎಂದು ಕುವೈತ್ ನಲ್ಲಿನ ಭಾರತೀಯ ದೂತಾವಾಸ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಅವರನ್ನು ಟೀಕಿಸಿದೆ.

ಕುವೈತಿಗೆ ಬಿಜೆಪಿ ನಾಯಕರ ಪ್ರವೇಶವನ್ನು ನಿಷೇಧಿಸಬೇಕೆಂದು "ಪ್ರಬಲ ಕುವೈತಿ ರಾಜಕಾರಣಿಗಳ' ಗುಂಪೊಂದು ಕುವೈತ್ ಸರಕಾರವನ್ನು ಆಗ್ರಹಿಸಿದೆ ಎಂದು ಹೇಳಿಕೊಂಡ ಟ್ವೀಟ್ ಒಂದನ್ನು ತರೂರ್ ರಿಟ್ವೀಟ್ ಮಾಡಿದ ನಂತರದ ಬೆಳವಣಿಗೆ ಇದಾಗಿದೆ.

ಕರ್ನಾಟಕದಲ್ಲಿನ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕುವೈತ್ ಸರಕಾರಕ್ಕೆ ಮೇಲಿನಂತೆ ಆಗ್ರಹಿಸಲಾಗಿದೆ ಎಂದೂ ಆ ಟ್ವೀಟ್ ನಲ್ಲಿ ಹೇಳಿತ್ತಲ್ಲದೇ "ಮುಸ್ಲಿಂ ಹುಡುಗಿಯರನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿರುವುದನ್ನು ಕಂಡು ಅವರು (ಕುವೈತ್ ರಾಜಕಾರಣಿಗಳು) ಸುಮ್ಮನೆ ಕುಳಿತು ನೋಡಲು ಸಾಧ್ಯವಿಲ್ಲ" ಎಂದೂ ಆ ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿತ್ತು.

ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ ಸಂದರ್ಭ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡ ತರೂರ್, ದೇಶೀಯ ಕ್ರಮಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುತ್ತವೆ ಎಂದಿದ್ದರು.

"ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ ಕುರಿತಂತೆ, ಅದರ ವಿರುದ್ಧ ಕ್ರಮಕೈಗೊಳ್ಳುವುದು ಬಿಡಿ, ಅದನ್ನು ಖಂಡಿಸಲು ಕೂಡ ಭಾರತದ ಪ್ರಧಾನಿ ಮನಸ್ಸು ಮಾಡದೇ ಇರುವ ಕುರಿತು  ಗಲ್ಫ್ ನಾದ್ಯಂತದ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ,''ಎಂದು ತರೂರ್ ಹೇಳಿಕೊಂಡಿದ್ದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕುವೈತಿನಲ್ಲಿರುವ ಭಾರತೀಯ ದೂತಾವಾಸ ಟ್ವೀಟ್ ಮಾಡಿದೆ. "ತನ್ನ ದೇಶವಿರೋಧಿ ಚಟುವಟಿಕೆಗಳಿಗಾಗಿ ʼಅಂಬ್ಯಾಸಿಡರ್ ಆಫ್ ಪೀಸ್ʼ ಎಂಬ ಪಾಕಿಸ್ತಾನಿ ಪ್ರಶಸ್ತಿ ಪಡೆದ ಪಾಕಿಸ್ತಾನಿ ಏಜಂಟರೊಬ್ಬರ ಭಾರತ ವಿರೋಧಿ ಟ್ವೀಟ್ ಅನ್ನು ಭಾರತದ ಮಾನ್ಯ ಸಂಸದರು ರಿಟ್ವೀಟ್ ಮಾಡಿರುವುದು ದುಃಖಕರ. ಇಂತಹ ಭಾರತ ವಿರೋಧಿ ಶಕ್ತಿಗಳನ್ನು ಬೆಂಬಲಿಸಬಾರದು" ಎಂದು ಆರೋಪ ವ್ಯಕ್ತಪಡಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ತರೂರ್ ತಾವು ಯಾವುದೇ ವ್ಯಕ್ತಿಯನ್ನು ಬೆಂಬಲಿಸುತ್ತಿಲ್ಲ, ಬದಲು ಟ್ವೀಟಿನಲ್ಲಿ ವ್ಯಕ್ತಪಡಿಸಿರುವ ಭಾವನೆಗಳ ಬಗ್ಗೆ ಕಾಳಜಿಯಿದೆ ಎಂದಿದ್ದಾರೆ. "ಕುವೈತಿನ ಭಾರತೀಯ ದೂತಾವಾಸದ ಅಭಿಪ್ರಾಯವನ್ನು ಒಪ್ಪುವುದರ ಜತೆಗೆ ಇಲ್ಲಿ ಅನುಚಿತ ವರ್ತನೆ ತೋರುವ ಮೂಲಕ ಇಂತಹ ದೇಶ-ವಿರೋಧಿ ಶಕ್ತಿಗೆ ಅಸ್ತ್ರ ಒದಗಿಸಬೇಡಿ ಎಂದು ಭಾರತ ಸರಕಾರವನ್ನು ಆಗ್ರಹಿಸುತ್ತೇನೆ,''ಎಂದು ತರೂರ್ ಬರೆದಿದ್ದಾರೆ.

ಈ ಬಗ್ಗೆ ಕುವೈತ್‌ ಭಾರತೀಯ ದೂತವಾಸ ʼಪಾಕಿಸ್ತಾನಿ ಏಜೆಂಟ್‌ʼ ಎಂದು ಆರೋಪಿಸಿರುವ ವಕೀಲ ಮುಜಬ್ಬಲ್‌ ಶರೀಕ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಅರಬ್‌ ರಾಷ್ಟ್ರಗಳಿಗೆ ಭಾರತ ಮತ್ತು ಪಾಕಿಸ್ತಾನ ಎರಡೂ ಸ್ನೇಹಿತರೇ. ನೀವು ನಮ್ಮನ್ನು ಪಾಕಿಸ್ತಾನಿ ಏಜೆಂಟ್‌ ಎಂದು ಕರೆದು ನಮ್ಮ ಹಿಜಾಬ್‌ ಕುರಿತಾದ ನಿಲುವನ್ನು ವಿರೋಧಿಸುವ ಹಿಂದುತ್ವ ವಿಚಾರಧಾರೆಗಳಿಗೆ ನಾವು ಮಣಿಯುವುದಿಲ್ಲ. ವಿಶ್ವದಲ್ಲಿ ಎಲ್ಲೇ ಮಾನವ ಹಕ್ಕುಗಳ ಉಲ್ಲಂಘನೆಯಾದರೂ ನಾವು ಖಂಡಿಸುತ್ತೇವೆ" ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News