ಪಂಜಾಬ್ ‌ನಲ್ಲಿ ಪಂಚಕೋನ ಸ್ಪರ್ಧೆ: ಮತದಾನ ಆರಂಭ

Update: 2022-02-20 02:11 GMT

ಹೊಸದಿಲ್ಲಿ: ದೇಶದ ಕುತೂಹಲ ಕೆರಳಿಸಿರುವ ಪಂಜಾಬ್ ವಿಧಾನಸಭೆಯ 117 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆ ಅಂಗವಾಗಿ ಭಾನುವಾರ ಮುಂಜಾನೆ ಮತದಾನ ಆರಂಭವಾಗಿದೆ. ಐದು ಪ್ರಮುಖ ಪಕ್ಷಗಳ ನಡುವಿನ ಹೋರಾಟದ ಅಂಗಳವಾಗಿ ಚುನಾವಣಾ ಕಣ ಮಾರ್ಪಟ್ಟಿದೆ.

ರಾಜ್ಯದಲ್ಲಿ 2.14 ಕೋಟಿಗೂ ಅಧಿಕ ಮತದಾರರು 1304 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಎರಡು ದಶಕಗಳಿಂದ ದ್ವಿ ಪಕ್ಷೀಯ ರಾಜಕೀಯಕ್ಕೇ ಸೀಮಿತವಾಗಿದ್ದ ರಾಜ್ಯ ರಾಜಕೀಯ 2014ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರವೇಶದೊಂದಿಗೆ ವೇದಿಕೆಯನ್ನು ತ್ರಿಕೋನ ಸ್ಪರ್ಧೆಗೆ ಸಜ್ಜುಗೊಳಿಸಿತ್ತು. ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಹಾಗೂ ಅಕಾಲಿದಳ ಬೇರ್ಪಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಈ ಬಾರಿ ಪ್ರತ್ಯೇಕವಾಗಿ ಕಣಕ್ಕೆ ಇಳಿದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭವಾದಾಗ ಅಕಾಲಿದಳ ಕೂಡಾ ಬಿಜೆಪಿ ಕೂಟವನ್ನು ತ್ಯಜಿಸಿತ್ತು.

ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಚುನಾವಣೆಗೆ ಸ್ವಲ್ಪ ಮೊದಲು ಹೊಸ ಪಕ್ಷವನ್ನು ಘೋಷಿಸಿ ಕಣಕ್ಕೆ ಇಳಿದಿರುವುದು ಚುನಾವಣೆ ಕಾವು ಏರಲು ಕಾರಣವಾಗಿದೆ. ಮಾಳವ, ಮಾಝ ಮತ್ತು ದವೋಬಾ ಪ್ರದೇಶಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್ ಪಕ್ಷ ಹಾಲಿ ಮುಖ್ಯಮಂತ್ರಿ ಹಾಗೂ ದಲಿತ ಮುಖಂಡ ಚರಣ್‌ಜೀತ್ ಸಿಂಗ್ ಚನ್ನಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿದ್ದು, 1977ರಿಂದಲೂ ಚಾಲ್ತಿಯಲ್ಲಿರುವ ಸಿಕ್ಖ್ ಜಾಟ್ ಸಮುದಾಯದ ಮುಖಂಡರನ್ನು ಮುಖ್ಯಮಂತ್ರಿಯಾಗಿ ಬಿಂಬಿಸುವ ಸಂಪ್ರದಾಯಕ್ಕೆ ಪಕ್ಷ ಮಂಗಳ ಹಾಡಿದೆ. ರಾಜ್ಯದಲ್ಲಿ ಮೂರನೇ ಒಂದರಷ್ಟಿರುವ ದಲಿತ ಮತಗಳ ಮೇಲೆ ಕಾಂಗ್ರೆಸ್ ಪಕ್ಷ ಕಣ್ಣಿಟ್ಟಿದೆ. ಇದಕ್ಕೆ ಪ್ರತಿಯಾಗಿ ಆಮ್ ಆದ್ಮಿ ಪಕ್ಷ ಜಾಟ್ ಸಿಕ್ಖ್ ಮುಖಂಡ ಭಗವತ್ ಸಿಂಗ್ ಮಾನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದೆ.

ಆಮ್ ಆದ್ಮಿ ಪಕ್ಷ ಪ್ರಬಲ ಜಾಟ್ ಸಮುದಾಯದ ಓಲೈಕೆಗೆ ನಡೆಸುತ್ತಿರುವ ಪ್ರಯತ್ನಗಳಿಗೆ ಶಿರೋಮಣಿ ಅಕಾಲಿ ದಳ ತೀವ್ರ ಪ್ರತಿರೋಧ ಒಡ್ಡಿದೆ. ಬಾದಲ್‌ಗಳ ನಾಯಕತ್ವ ಹಾಗೂ ಗುರುದ್ವಾರಗಳ ಬೃಹತ್ ಜಾಲದ ಬೆಂಬಲದೊಂದಿಗೆ ಶಿರೋಮಣಿ ಅಕಾಲಿದಳ ಅಧಿಕಾರದ ಕನಸು ಕಾಣುತ್ತಿದೆ. ಕಾಂಗ್ರೆಸ್‌ನ ನಡೆಯಿಂದಾಗಿ ಬಿಎಸ್ಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವದಿಂದ ಅಕಾಲಿದಳ ಹಿಂದೆ ಸರಿದಿದ್ದರೂ, ಪಕ್ಷದ ಉತ್ಸಾಹಕ್ಕೇನೂ ಕೊರತೆ ಇಲ್ಲ. ಪಕ್ಷದ ಫೈರ್‌ಬ್ರಾಂಡ್ ನಾಯಕ ಬಿಕ್ರಮ್ ಮಜೀತಿಯಾ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಅವರನ್ನು ಅಮೃತಸರ ಪೂರ್ವ ಕ್ಷೇತ್ರದಲ್ಲಿ ಎದುರಿಸುತ್ತಿದ್ದಾರೆ.

ಎರಡು ದಶಕಗಳ ಮಿತ್ರಪಕ್ಷವಾದ ಅಕಾಲಿದಳದಿಂದ ಬೇರ್ಪಟ್ಟು ನೆಲೆ ಕಳೆದುಕೊಂಡ ಬಿಜೆಪಿ, ಕಾಂಗ್ರೆಸ್‌ನಿಂದ ಸಿಡಿದ ಮಾಜಿ ಸಿಎಂ ಅಮರೀಂದರ್ ಸಿಂಗ್ ಹಾಗೂ ಅಕಾಲಿದಳದ ಬಮಡಾಯ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಅವರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ಸಿಕ್ಖರ ಮನವೊಲಿಕೆಗೆ ಹರಸಾಹನ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News