ಕಳೆದ 45 ವರ್ಷಗಳಿಂದ ಇದ್ದ ಶಾಂತಿ ಕಳೆದುಕೊಂಡಿದ್ದೇವೆ, ಚೀನಾದೊಂದಿಗಿನ ಸಂಬಂಧ ಕಷ್ಟದ ಹಂತದಲ್ಲಿದೆ: ಸಚಿವ ಜೈಶಂಕರ್
ಮ್ಯೂನಿಚ್: ಚೀನಾದೊಂದಿಗಿನ ಭಾರತದ ಸಂಬಂಧವು ಅತ್ಯಂತ ನಿರ್ಣಾಯಕ ಘಟ್ಟದಲ್ಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಮ್ಯೂನಿಚ್‌ನಲ್ಲಿ ನಡೆದ ʼಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ (MSC)-2022ʼ ಪ್ಯಾನೆಲ್ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಚೀನಾದೊಂದಿಗೆ ಭಾರತಕ್ಕೆ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಗಡಿ ಒಪ್ಪಂದವನ್ನು ಚೀನಾ ಉಲ್ಲಂಘಿಸಿದ ಬಳಿಕ ಸಂಬಂಧ ಹದಗೆಟ್ಟಿದೆ. ಗಡಿಯಲ್ಲಿರುವ ಸ್ಥಿತಿಯು (ದೇಶಗಳ ನಡುವಿನ) ಸಂಬಂಧದ ಸ್ಥಿತಿಯನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ 45 ವರ್ಷಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ. ಶಾಂತಿಯಿಂದ ಇತ್ತು, ಸ್ಥಿರವಾದ ಗಡಿ ನಿರ್ವಹಣೆ ಇತ್ತು, 1975 ರಿಂದ ಗಡಿಯಲ್ಲಿ ಯಾವುದೇ ಮಿಲಿಟರಿ ಸಾವುನೋವುಗಳು ಇರಲಿಲ್ಲ ಎಂದು ಜೈಶಂಕರ್ ಹೇಳಿರುವುದಾಗಿ scroll.in ವರದಿ ಮಾಡಿದೆ.
ನಮ್ಮ ಒಪ್ಪಂದಗಳನ್ನು ಮೀರಿ ಗಡಿಗೆ ಮಿಲಿಟರಿ ಶಕ್ತಿಗಳನ್ನು ತರುವುದರೊಂದಿಗೆ ಅದು ಬದಲಾಯಿತು. ನಾವು ಅದನ್ನು ಗಡಿ ಎಂದು ಕರೆಯುತ್ತೇವೆ ಆದರೆ ಇದು ನಿಜವಾಗಿ ಗಡಿ ನಿಯಂತ್ರಣ ರೇಖೆಯಾಗಿದೆ ಮತ್ತು ಚೀನೀಯರು ಆ ಒಪ್ಪಂದಗಳನ್ನು ಉಲ್ಲಂಘಿಸಿದ್ದಾರೆ. ಗಡಿಯಲ್ಲಿರುವ ಸ್ಥಿತಿಯು ದೇಶಗಳ ಸಂಬಂಧದಲ್ಲಿ ಪರಿಣಾಮ ಬೀರುವುದು ಸಹಜ ಎಂದು ಸಚಿವರು ಹೇಳಿದ್ದಾರೆ.
ಹಾಗಾಗಿ, ಖಂಡಿತವಾಗಿಯೂ ಚೀನಾದೊಂದಿಗಿನ ಸಂಬಂಧವು ಅತ್ಯಂತ ಕಷ್ಟಕರ ಹಂತದಲ್ಲಿ ಸಾಗುತ್ತಿದೆ. 2020 ರ ಜೂನ್ ಮೊದಲು ಎಲ್ಲವೂ ಸರಿಯಿತ್ತು. ಪಾಂಗಾಂಗ್ ಸರೋವರದ ಬಳಿ ಘರ್ಷಣೆ ನಡೆದ ಬಳಿಕ ಸಂಬಂಧ ಬಿಗಡಾಯಿಸಿದೆ ಎಂದು ಹೇಳಿದ್ದಾರೆ.